ಶ್ಲೋಕ – 02
ಅಧಿಯಜ್ಞಃ ಕಥಂ ಕೋSತ್ರ ದೇಹೇSಸ್ಮಿನ್ ಮಧುಸೂದನ ।
ಪ್ರಯಾಣಕಾಲೇ ಚ ಕಥಂ ಜ್ಞೇಯೋSಸಿ ನಿಯತಾತ್ಮಭಿಃ ॥೨॥
ಅಧಿಯಜ್ಞಃ ಕಥಮ್ ಕಃ ಅತ್ರ ದೇಹೇ ಅಸ್ಮಿನ್ ಮಧುಸೂದನ ।
ಪ್ರಯಾಣ ಕಾಲೇ ಚ ಕಥಮ್ ಜ್ಞೇಯಃ ಅಸಿ ನಿಯತ ಆತ್ಮಭಿಃ –ಮಧುಸೂದನ,
ಇಲ್ಲಿ ಈ ದೇಹದಲ್ಲಿ ‘ಅಧಿಯಜ್ಞ’ಯಾರು? ಮತ್ತು ಹೇಗೆ? ಬಗೆ ಹಿಡಿತದಲ್ಲಿಟ್ಟವರು ಕೊನೆಯ ಕಾಲದಲ್ಲಿ ನಿನ್ನನ್ನು ಹೇಗೆ ನೆನೆಯಬೇಕು?
ಮುಂದುವರಿದು ಅರ್ಜುನ ಕೇಳುತ್ತಾನೆ “ಅಧಿಯಜ್ಞ ಅಂದರೆ ಯಾರು?” ಎಂದು.
ನಮ್ಮ ದೇಹದೊಳಗಿರುವ ಅಧಿಯಜ್ಞ ಯಾರು ಮತ್ತು ಹೇಗೆ? ಅಧಿಯಜ್ಞದ ಅರ್ಥವ್ಯಾಪ್ತಿ ಏನು?
ಎನ್ನುವುದು ಅರ್ಜುನನ ಪ್ರಶ್ನೆ. ಇಲ್ಲಿ ಪುನಃ ವ್ಯಾಸರು “ಮಧುಸೂದನ” ಎನ್ನುವ ವಿಶೇಷಣವನ್ನು ಬಳಸಿ ಅರ್ಜುನನ ಪ್ರಶ್ನೆಯ ಭಾವನೆಯನ್ನು ನಮಗೆ ತಿಳಿಸುತ್ತಾರೆ.
“ಮಧುಸೂದನ” ಅನ್ನುವ ನಾಮಕ್ಕೆ ಎರಡು ಪ್ರಮುಖ ಅರ್ಥವಿದೆ.
‘ಮಧು’ ಅಂದರೆ ಆನಂದ(Inner bliss). ‘ಸೂದ’ ಎಂದರೆ ಸತ್ಕರ್ಮವನ್ನು ಮಾಡುವ ಸಾತ್ವಿಕರು.
ಆದ್ದರಿಂದ ಮಧುಸೂದನ ಎಂದರೆ ಸಾತ್ವಿಕರೊಳಗಿದ್ದು ಅವರಿಗೆ ಆನಂದವನ್ನು ಕೊಡುವವನು ಎಂದರ್ಥ.
‘ಸೂದ’ ಎಂದರೆ ನಾಶ ಎನ್ನುವ ಇನ್ನೊಂದು ಅರ್ಥವಿದೆ. ಆದ್ದರಿಂದ ದುರ್ಜನರ ಆನಂದವನ್ನು ನಾಶಮಾಡುವವನು ಮಧುಸೂದನ.
“ನಮ್ಮೊಳಗೆ ಕೂತು ಆನಂದ ಕೊಡುವವನೂ ನೀನೇ, ದುಃಖ ಕೊಡುವವನೂ ನೀನೆ.
ನಮ್ಮೊಳಗಿದ್ದು ಎಲ್ಲ ಯಜ್ಞಗಳನ್ನು ನಿಯಂತ್ರಿಸುವವನು ನೀನೆ. ಆದ್ದರಿಂದ ನೀನೇ ಅಧಿಯಜ್ಞ ಎನ್ನುವುದು ನನ್ನ ತಿಳುವಳಿಕೆ.
ಇದನ್ನು ನನಗೆ ವಿವರಿಸು” ಎನ್ನುವ ಅರ್ಜುನನ ಭಾವವನ್ನು ಈ ವಿಶೇಷಣದ ಮೂಲಕ ವ್ಯಾಸರು ಇಲ್ಲಿ ವಿವರಿಸಿದ್ದಾರೆ.
ಅರ್ಜುನ ಕೇಳುತ್ತಾನೆ “ನಮ್ಮ ಜೀವನದ ಕೊನೆಯ ಶ್ರೇಷ್ಠವಾದ ಯಾತ್ರೆಯಲ್ಲಿ ಜೀವದ ದೇಹ ನಿರ್ಗಮನದ ಅನುಸಂಧಾನ ಮತ್ತು ಹೋಗುವ ವಿವರವನ್ನು ತಿಳಿಸು” ಎಂದು.
ಮೇಲಿನ ಶ್ಲೋಕದಲ್ಲಿ ಉಪಯೋಗಿಸಿದ ಪುರುಷೋತ್ತಮ ಮತ್ತು ಮಧುಸೂದನ ಎನ್ನುವ ಎರಡು ವಿಶೇಷಣದ ಹಿಂದಿನ ಅರ್ಥವನ್ನು ನೋಡಿದಾಗ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ
-ಅರ್ಜುನನಿಗೆ ಈ ಆರು ಸಂಗತಿಯ (ಪದಗಳ) ನಿಜವಾದ ಅರ್ಥ ತಿಳಿದಿತ್ತು ಎಂದು.
ಆದರೂ ಅದರ ವಿವರವನ್ನು ಭಗವಂತನಿಂದ ತಿಳಿದುಕೊಳ್ಳುವ ಉದ್ದೇಶದಿಂದ ಆತ ಈ ಪ್ರಶ್ನೆಯನ್ನು ಕೃಷ್ಣನಲ್ಲಿ ಕೇಳುತ್ತಾನೆ.
ಸಾಮಾನ್ಯವಾಗಿ ತಿಳಿದವರು ತಮಗೆ ತಿಳಿದಿದ್ದರೂ ಕೂಡಾ ಇನ್ನೊಬ್ಬರಿಗೆ ತಿಳಿಸುವ ಉದ್ದೇಶದಿಂದ ಈ ರೀತಿ ಪ್ರಶ್ನೆ ಮಾಡುತ್ತಾರೆ.
ಇಲ್ಲಿ ಅರ್ಜುನ ತಾನು ತಿಳಿದಿರುವುದನ್ನು ದೃಡೀಕರಿಸಿಕೊಳ್ಳುವುದಕ್ಕೊಸ್ಕರ ಮತ್ತು ಇಡೀ ಮಾನವ ಜನಾಂಗಕ್ಕೆ ಭಗವಂತನ ವಿವರಣೆಯನ್ನು ತಿಳಿಸುವುದಕ್ಕೋಸ್ಕರ ಈ ಪ್ರಶ್ನೆಯನ್ನು ಕೃಷ್ಣನ ಮುಂದಿಟ್ಟಿದ್ದಾನೆ.
ನಮಗೆ ಅನಿಸಬಹುದು “ಯುದ್ಧರಂಗದಲ್ಲಿ ನಿಂತಿರುವ ಅರ್ಜುನ ಏಕೆ ಇಂತಹ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ? ಇಲ್ಲಿ ಅದರ ಅಗತ್ಯ ಏನಿದೆ?” ಎಂದು.
ಸಾಮಾನ್ಯವಾಗಿ ಯುದ್ಧರಂಗದಲ್ಲಿ ನಿಂತವರಿಗೆ ಸಾವು ಕಾಡುವಷ್ಟು ಇನ್ನ್ಯಾರನ್ನೂ ಕಾಡುವುದಿಲ್ಲ. ಅವರನ್ನು ಪ್ರತಿಕ್ಷಣ ಸಾವು ನಿರೀಕ್ಷಿಸುತ್ತಿರುತ್ತದೆ.
ಅವರು ಸಾವು ಮತ್ತು ಸಾವಿನ ಆಚೆಗಿನ ಸ್ಥಿತಿಯ ಬಗ್ಗೆ ಜಾಗೃತರಾಗಿರುತ್ತಾರೆ. ಸಾವಿನಿಂದಾಚೆಗೆ ಏನು ಎನ್ನುವುದು ಸೈನಿಕರಿಗೆ ಬಹಳ ಮಹತ್ವದ್ದಾಗಿರುತ್ತದೆ.
ಈವರೆಗಿನ ಕೃಷ್ಣಾರ್ಜುನ ಸಂವಾದದಲ್ಲಿ ಎಲ್ಲಿಯೂ ಕೃಷ್ಣ ಅರ್ಜುನನಿಗೆ ಗೆಲುವಿನ ಭರವಸೆಯನ್ನು ಕೊಟ್ಟಿಲ್ಲ. ಧರ್ಮದ ಪರ ಹೋರಾಡುವುದು ನಿನ್ನ ಕರ್ತವ್ಯ ಅಂದಿದ್ದಾನೆ ಅಷ್ಟೇ.
ಆದ್ದರಿಂದ ಯುದ್ಧರಂಗದಲ್ಲಿರುವ ಅರ್ಜುನನಿಗೆ ಸಾವು ಮತ್ತು ಸಾವಿನಿಂದಾಚೆಗೆ ಏನು ಎನ್ನುವುದು ಬಹಳ ಮುಖ್ಯ ವಿಚಾರ.
ಅರ್ಜುನನ ಪ್ರಶ್ನೆಗೆ ಭಗವಂತನ ಉತ್ತರವೇ ಎಂಟನೆಯ ಅಧ್ಯಾಯದ ಉಳಿದ ಭಾಗ.
