ಶ್ಲೋಕ – 10
ಪ್ರಯಾಣಕಾಲೇ ಮನಸಾSಚಲೇನ ಭಕ್ತ್ಯಾ ಯುಕ್ತೋ ಯೋಗಬಲೇನ ಚೈವ ।
ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್ ಸ ತಂ ಪರಂ ಪುರುಷಮುಪೈತಿ ದಿವ್ಯಮ್ ॥೧೦॥
ಪ್ರಯಾಣ ಕಾಲೇ ಮನಸಾ ಅಚಲೇನ ಭಕ್ತ್ಯಾ ಯುಕ್ತಃ ಯೋಗಬಲೇನ ಚ ಏವ ।
ಭ್ರುವೋಃ ಮಧ್ಯೇ ಪ್ರಾಣಮ್ ಆವೇಶ್ಯ ಸಮ್ಯಕ್ ಸಃ ತಮ್ ಪರಮ್ ಪುರುಷಮ್ ಉಪೈತಿ ದಿವ್ಯಮ್ –
ಕೊನೆಯ ಕಾಲದಲ್ಲಿ ಭಗವಂತನಲ್ಲಿ ಭಕ್ತಿಯಿಟ್ಟು, ಬಿಗಿಯಾದ ಬಗೆಯಿಂದ ,
ಹುಬ್ಬುಗಳ ನಡುವೆ ಪ್ರಾಣವಾಯುವನ್ನು ಕದಲದಂತೆ ಇರಗೊಳಿಸಿ,
ಪ್ರಾಣಾಯಾಮದ ಯೋಗದ ಮೂಲಕ ಕೂಡ ಲೀಲಾಲೋಲನಾದ ಆ ಪರಮಪುರುಷನನ್ನು ಪಡೆಯಬಹುದು.
ಭಗವಂತನನ್ನು ಸೇರುವ ಇನ್ನೊಂದು ಮಾರ್ಗ ಹಠಯೋಗ.
ಈ ಮಾರ್ಗ ಕಠಿಣವಾದದ್ದು.ಇದು ಯಮನಿಯಮನ-ಪ್ರಾಣಾಯಾಮ-ಪ್ರತ್ಯಾಹಾರಗಳಿಂದ ಭಗವಂತನನ್ನು ಸೇರುವ ಬಗೆ.
ಈ ಮಾರ್ಗದಲ್ಲಿ ಸಾಧನೆ ಮಾಡುವವರು ತಮ್ಮ ಸಾವಿನ ಕಾಲದಲ್ಲಿ ಏನು ಮಾಡಬೇಕು ಎನ್ನುವುದನ್ನು ಕೃಷ್ಣ ಈ ಶ್ಲೋಕದಲ್ಲಿ ವಿವರಿಸುತ್ತಾನೆ.
ಆಸನ ಪ್ರಾಣಾಯಾಮ ಮಾಡಿ ಸ್ಥಿರವಾದ ದೇಹ, ಸ್ಥಿರವಾದ ಪ್ರಾಣಮಯ ಕೊಶವನ್ನು ಸಾಧಿಸಿದ ಮೇಲೆ, ಪ್ರತ್ಯಾಹಾರದ ಮೂಲಕ ತನ್ನೊಳಗೆ ತುಂಬಿದ ಕೆಟ್ಟ ಸಂಗತಿಗಳನ್ನು ಹೊರ ಹಾಕಿ, ಕೆಟ್ಟ ವಿಚಾರ ಒಳಬಾರದಂತೆ ತಡೆದು, ಏಕಾಗ್ರತೆ ಸಾಧಿಸುವುದು. ಇದು ತುಂಬಾ ಧೀರ್ಘವಾದ ಕಠಿಣ ಸಾಧನೆ. ಇಂತವರು ತಮ್ಮ ಹೃತ್ಕಮಲ ಮಧ್ಯ(ಅನಾಹತ ಚಕ್ರ) ದಲ್ಲಿ ಪ್ರಾಣಶಕ್ತಿಯೊಂದಿಗಿರುವ ಜೀವವನ್ನು ಅಲ್ಲಿಂದ ಊರ್ಧ್ವ ಮುಖವಾಗಿ ವಿಶುದ್ಧಿಚಕ್ರದ ಮೂಲಕ ಭ್ರು ಮಧ್ಯ (ಎರಡು ಹುಬ್ಬುಗಳ ನಡುವೆ ಇರುವ ಆಜ್ಞಾ ಚಕ್ರ) ತಂದು ನಿಲ್ಲಿಸಬೇಕು.
ಈ ಪ್ರಕ್ರಿಯೆ ಅತ್ಯಂತ ಕಠಿಣ. ಈ ಸಂಪೂರ್ಣ ಕ್ರಿಯೆಯಲ್ಲಿ ಅನನ್ಯ ಭಕ್ತಿ ಬಹಳ ಮುಖ್ಯ. ಈ ರೀತಿ ಭ್ರು ಮಧ್ಯದಿಂದ ಸಹಸ್ರಾರದ ಬ್ರಹ್ಮರಂದ್ರದ ಮೂಲಕ ಜೀವ ಹೊರ ಹೋದರೆ ಅವರು ನೇರವಾಗಿ ಭಗವಂತನನ್ನು ಸೇರುತ್ತಾರೆ.
ಈ ರೀತಿಯ ಹಠಯೋಗ ಕಠಿಣ ಸಾಧನವಾಗಿರುವುದರಿಂದ ಪ್ರಾಚೀನರು ಅದಕ್ಕೆ ಪೂರಕವಾದ ಅತ್ಯಂತ ಸರಳ ವಿಧಾನವನ್ನು ತಮ್ಮ ದೈನಂದಿನ ಜೀವನದಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕೆ ಉತ್ತಮ ಉದಾಹರಣೆ ಊರ್ಧ್ವಪುಂಡ್ರ. ಇದು ಜೀವದ ಊರ್ಧ್ವಮುಖ ಗತಿಗೆ ಸಂಬಂಧಪಟ್ಟಿದ್ದು. ಇದು ಪೂರ್ಣ ಪ್ರಮಾಣದಲ್ಲಿ ದೇಹದಲ್ಲಿರುವ ಶಕ್ತಿ ಕೇಂದ್ರಗಳನ್ನು ಜಾಗೃತಿಗೊಳಿಸುವ ಒಂದು ಸರಳ ವಿಧಾನ. [ಆದರೆ ಇಂದು ನಾವು ಏಕೆ ನಾಮ ಹಾಕಿ ಕೊಳ್ಳುತ್ತೇವೆ ಎನ್ನುವುದೇ ನಮಗೆ ತಿಳಿದಿಲ್ಲ].
ಹಠಯೋಗವನ್ನು ಸರಿಯಾದ ಮಾರ್ಗದರ್ಶನ ಇಲ್ಲದೆ ಮಾಡುವುದು ಅಪಾಯಕಾರಿ.
ಭಾಗವತದ ದ್ವಿತೀಯ ಸ್ಕಂದದಲ್ಲಿ ಜೀವವನ್ನು ಮೇಲಕ್ಕೆ ಕೊಂಡೊಯ್ಯುವ ಹಂತವನ್ನು ಒಂದು ಅಧ್ಯಾಯದಲ್ಲಿ ವಿವರವಾಗಿ ವಿವರಿಸಿದ್ದಾರೆ.
ಹೀಗೆ ಯೋಗದ ಮೂಲಕ ಹಠಮಾಡಿ ಭಗವಂತನನ್ನು ಸೇರಬಹುದು,
ಅಥವಾ ತಾಯಿಯಲ್ಲಿ ಮಗು ಹಠಮಾಡಿದಂತೆ ಭಗವಂತನಲ್ಲಿ ಭಕ್ತ ಸದಾ ಭಕ್ತಿಯೆಂಬ ಹಠಮಾಡಿ ಆತನನ್ನು ಸೇರಬಹುದು.
