ಶ್ಲೋಕ – 13
ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ ಮಾಮನುಸ್ಮರನ್ ।
ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ॥೧೩॥
ಉಚ್ಚಾರಣೆ- ಓಂ ಇತಿ ಏಕಾಕ್ಷರಮ್ ಬ್ರಹ್ಮ ವ್ಯಾಹರನ್ ಮಾಮ್ ಅನುಸ್ಮರನ್ ।
ಯಃ ಪ್ರಯಾತಿ ತ್ಯಜನ್ ದೇಹಮ್ ಸಃ ಯಾತಿ ಪರಮಾಮ್ ಗತಿಮ್ –
ಎಲ್ಲ ನಾಡೀ ದ್ವಾರಗಳನ್ನು ತಡೆ ಹಿಡಿದು , ಬಗೆಯನ್ನು ಭಗವಂತನಲ್ಲೆ ಬಿಗಿ ಹಿಡಿದು,
ತನ್ನ ಪ್ರಾಣವಾಯುವನ್ನು ನೆತ್ತಿಯಲ್ಲಿರಿಸಿ ಯೋಗ ಸಾಧನೆಯಲ್ಲಿ ನೆಲೆಗೊಂಡವನು,
‘ಓಮ್’ ಎಂಬ ಒಂದಕ್ಷರದಿಂದ ವಾಚ್ಯನಾದ ಪರತತ್ವವನ್ನು ಕೊಂಡಾಡುತ್ತಾ,
ನನ್ನನ್ನು ನೆನೆಯುತ್ತ, ದೇಹ ತೊರೆದು ಮೇಲೇರಿದವನು ಮರಳಿ ಬರದ ತಾಣವನ್ನು ಸೇರುತ್ತಾನೆ.
ಸಹಸ್ರಾರದತ್ತ ಜೀವವನ್ನು ಕೊಂಡೊಯ್ಯುವಾಗ ದೇಹದ ಇತರ ಎಲ್ಲಾ ದ್ವಾರಗಳನ್ನೂ ಯೋಗ ಬಲದಿಂದ ಮುಚ್ಚಬೇಕು ಮತ್ತು
ಮುಚ್ಚಿರುವ ಸಹಸ್ರಾರದ ಬಾಗಿಲನ್ನು ತೆರೆದು ಹೊರಹೋಗಬೇಕು. ಈ ರೀತಿ ಮಾಡುವಾಗ ಮನಸ್ಸನ್ನು ಆ ಸರ್ವಸಂಹಾರಕ ಭಗವಂತನಲ್ಲಿ ನೆಲೆಗೊಳಿಸಬೇಕು.
ಪೂರ್ಣಪ್ರಮಾಣದಲ್ಲಿ ತನ್ನ ಯೋಗಾಭ್ಯಾಸವನ್ನು ಬಳಸಿ, ಶ್ವಾಸ ನಿರೋಧ ಮಾಡಿ, ಮನಸ್ಸನ್ನು ಭಗವಂತನಲ್ಲಿಟ್ಟು ಧ್ಯಾನ ಮಾಡಬೇಕು.
“ಓಂಕಾರ ಪ್ರತಿಪಾಧ್ಯನಾದ ನನ್ನನ್ನು ಓಂಕಾರದಿಂದ ನೆನೆಯುತ್ತಾ ಸಹಸ್ರರದ ಬಾಗಿಲಿನಿಂದ ಹೊರಬಂದು
ದೇಹ ತ್ಯಾಗ ಮಾಡಿ ಮೇಲೇರಿದವನು ಮುಂದೆಂದೂ ಮರಳಿ ಬರದ ತಾಣವಾದ ಮೋಕ್ಷ(ಭಗವಂತ)ವನ್ನು ಸೇರುತ್ತಾನೆ”.
ಈ ಸಾಧನೆ ಕೇವಲ ಹಠಯೋಗಿಗಳಿಗೆ ಸಾಧ್ಯ ಮತ್ತು ಇದು ತುಂಬಾ ಕಷ್ಟದ ಸಾಧನೆ.
ಎಲ್ಲರೂ ಈ ರೀತಿ ಯೋಗಾಭ್ಯಾಸ ಮಾಡಿ ಸಿದ್ಧಿ ಪಡೆಯುವುದು ಸಾಧ್ಯವಿಲ್ಲ.
ಅದಕ್ಕಾಗಿ ಮುಂದಿನ ಶ್ಲೋಕದಲ್ಲಿ ಕೃಷ್ಣ ಸುಲಭದ ಮಾರ್ಗವನ್ನು ವಿವರಿಸುತ್ತಾನೆ.

[…] ಇದನ್ನು ಓದಿ: ಭಗವದ್ಗೀತೆ ಅಧ್ಯಾಯ- 8 , ಶ್ಲೋಕ-13 […]