ಶ್ಲೋಕ – 17
ಸಹಸ್ರಯುಗಪರ್ಯಂತಮಹರ್ಯದ್ ಬ್ರಹ್ಮಣೋ ವಿದುಃ ।
ರಾತ್ರಿಂ ಯುಗಸಹಸ್ರಾಂತಾಂ ತೇSಹೋರಾತ್ರವಿದೋ ಜನಾಃ ॥೧೭॥
ಸಹಸ್ರ ಯುಗ ಪರ್ಯಂತಮ್ ಅಹಃ ಯತ್ ಬ್ರಹ್ಮಣಃ ವಿದುಃ ।
ರಾತ್ರಿಮ್ ಯುಗ ಸಹಸ್ರಾಂತಾಮ್ ತೇ ಅಹಃ ರಾತ್ರ ವಿದಃ ಜನಾಃ –
ಸಾವಿರಾರು ಯುಗಗಳ ತನಕ ಭಗವಂತನ ಹಗಲು ಮತ್ತು ಸಾವಿರಾರು ಯುಗಗಳ ತನಕ ಇರುಳು ಎಂದು ತಿಳಿಯುತ್ತಾರೆ, ಅವರು ಹಗಲು-ಇರುಳು ಬಲ್ಲ ಜನರು.
ಭಗವಂತ ಕಾಲಾತೀತ ಆದರೂ ಕೂಡಾ ಆತನ ಅನುಸಂಧಾನಕ್ಕಾಗಿ ಆತನ ಸೃಷ್ಟಿ ಕಾಲವನ್ನು ಭಗವಂತನ ಹಗಲೆಂದೂ ಮತ್ತು ಪ್ರಳಯ ಕಾಲವನ್ನು ಭಗವಂತನ ರಾತ್ರಿ ಎಂದು ಕರೆಯುತ್ತಾರೆ. ಒಂದು ಸಾವಿರ ಯುಗಚಕ್ರದ ಆವೃತಿಗೆ ಒಂದು ಬ್ರಹ್ಮನ ದಿನ.
ಯುಗಚಕ್ರ ಎಂದರೆ ಚತುರ್ಯುಗ- ಕಲಿಯುಗ 4,32,000 ವರ್ಷಗಳು; ದ್ವಾಪರ ಯುಗ 8,64,000 ವರ್ಷಗಳು; ತ್ರೇತಾಯುಗ 12,96,000 ವರ್ಷಗಳು;
ಕೃತಯುಗ 17,28,000 ವರ್ಷಗಳು; ಒಟ್ಟಿಗೆ ಒಂದು ಯುಗಚಕ್ರ ಎಂದರೆ 43,20,000 ವರ್ಷಗಳು. ಇಂತಹ ಒಂದು ಸಾವಿರ ಯುಗ ಚಕ್ರಗಳು ಬ್ರಹ್ಮನ ಒಂದು ಹಗಲು. ಅಂದರೆ 432 ಕೋಟಿ ವರ್ಷ. ಆದ್ದರಿಂದ ಬ್ರಹ್ಮನ ಒಂದು ದಿನ ಅಂದರೆ 864 ಕೋಟಿ ವರ್ಷ. ಚತುರ್ಮುಖ ಬ್ರಹ್ಮನ ಆಯಸ್ಸು ಅಥವಾ ಸತ್ಯಲೋಕದ ಆಯಸ್ಸು 100 ವರ್ಷ. ಅಂದರೆ 864 ಕೋಟಿ X 360 X 100=31,104,000,0000000(ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ) ವರ್ಷ.
ಇದು ಭಗವಂತನ ಸೃಷ್ಟಿ ಕಾಲ(ಹಗಲು). ನಂತರ ಮಹಾಪ್ರಳಯ. ಈ ಮಹಾಪ್ರಳಯದ ಕಾಲ 31,104 ಸಾವಿರ ಕೋಟಿ ವರ್ಷ(ರಾತ್ರಿ). ಇದು ಭಗವಂತನ ಸೃಷ್ಟಿ ಮತ್ತು ಸಂಹಾರದ ಲೆಕ್ಕಾಚಾರ.
ಪ್ರಳಯಗಳಲ್ಲಿ ಮೂರು ವಿಧ. ೧. ಮನ್ವಂತರ ಪ್ರಳಯ; ೨. ದಿನಪ್ರಳಯ; ೩. ಮಹಾಪ್ರಳಯ. [ಈ ಮೂರು ಪ್ರಳಯಗಳಲ್ಲದೆ ಇನ್ನೂ ಅನೇಕ ಚಿಕ್ಕ ಪ್ರಳಯಗಳಾಗುತ್ತವೆ. ಆ ಪ್ರಳಯಗಳಲ್ಲಿ ಭೂಮಿಯ ಯಾವುದೊ ಒಂದು ಭಾಗ ನಾಶವಾಗಬಹುದು].ಮನ್ವಂತರ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುವುದಿಲ್ಲ-ಆದರೆ ನಾಗರೀಕತೆ ನಾಶವಾಗುತ್ತದೆ.
ದಿನಪ್ರಳಯ ಚತುರ್ಮುಖ ಬ್ರಹ್ಮನ ರಾತ್ರಿ. ಅಂದರೆ ಪ್ರತೀ 432 ಕೋಟಿ ವರ್ಷಕ್ಕೊಮ್ಮೆ ದಿನಪ್ರಳಯ.
ಈ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುತ್ತದೆ.ಮಹಾಪ್ರಳಯ ಪ್ರತೀ 31,104 ಸಾವಿರ ಕೋಟಿ ವರ್ಷಕ್ಕೊಮ್ಮೆ ಹಾಗು ಈ ಪ್ರಳಯದಲ್ಲಿ ಸತ್ಯ ಲೋಕದಿಂದ ಹಿಡಿದು ಸರ್ವ ಲೋಕಗಳೂ ಸೂಕ್ಷ್ಮಾತಿ ಸೂಕ್ಷ್ಮ ಪರಮಾಣುವಿನ ರೂಪದಲ್ಲಿ ಭಗವಂತನಲ್ಲಿ ಲೀನವಾಗುತ್ತವೆ.
ಇದನ್ನು ಓದು: ಭಗವದ್ಗೀತೆ ಅಧ್ಯಾಯ-8, ಶ್ಲೋಕ -16

[…] ಹಿಂದಿನ ಶ್ಲೋಕ: ಭಗವದ್ಗೀತೆ ಅಧ್ಯಾಯ-8, ಶ್ಲೋಕ -17 […]