ಶ್ಲೋಕ – 21
ಅವ್ಯಕ್ತೋSಕ್ಷರ ಇತ್ಯುಕ್ತಸ್ತಮಾಹುಃ ಪರಮಾಂ ಗತಿಮ್ ।
ಯಂ ಪ್ರಾಪ್ಯ ನ ನಿವರ್ತಂತೇ ತದ್ ಧಾಮ ಪರಮಂ ಮಮ ॥೨೧॥
ಅವ್ಯಕ್ತಃ ಅಕ್ಷರಃ ಇತಿ ಉಕ್ತಃ ತಮ್ ಆಹುಃ ಪರಮಾಮ್ ಗತಿಮ್ ।
ಯಮ್ ಪ್ರಾಪ್ಯ ನ ನಿವರ್ತಂತೇ ತತ್ ಧಾಮ ಪರಮಮ್ ಮಮ –
ಈ ಅವ್ಯಕ್ತ ತತ್ವವನ್ನೇ ‘ಅಕ್ಷರ’ ನಾದ ಭಗವಂತನೆನ್ನುತ್ತಾರೆ.ಅವನೆ ಕೊನೆಯಾಸರೆ ಎನ್ನುತ್ತಾರೆ. ಅವನನ್ನು ಪಡೆದವರು ಮತ್ತೆ ಮರಳಿ ಬರುವುದಿಲ್ಲ. ಅದು ನನ್ನ ಹಿರಿದಾದ ಸ್ವರೂಪ.
ಎಲ್ಲರೂ ಹೋಗಿ ಸೇರಬೇಕಾದ ಸರ್ವಶ್ರೇಷ್ಠ ಸ್ಥಾನ ಈ ಅವ್ಯಕ್ತ ತತ್ವ. ಆತನೇ ‘ಅಕ್ಷರ’ ಶಬ್ದದ ಮುಖ್ಯಾರ್ಥ.
ಎಂದೂ ನಾಶವಿಲ್ಲದ, ಎಲ್ಲಾ ಕಡೆ ವ್ಯಾಪಿಸಿರುವ,ಯಾರು ಏನು ಬಯಸಿದರೂ ಅದನ್ನು ಕೊಡತಕ್ಕ, ಸರ್ವಸಮರ್ಥ, ಇಂದ್ರಿಯಗಳ ಅನುಭವ ಕೊಡುವವ, ಸಮಸ್ತ ಶಬ್ದವಾಚ್ಯ-ಭಗವಂತ. ಅವನನ್ನು ಸೇರಿದರೆ ಮತ್ತೆ ಮರಳಿ ಸಂಸಾರದಲ್ಲಿ ಹುಟ್ಟಬೇಕಾಗಿಲ್ಲ. “ಅದು ನನ್ನ ಹಿರಿದಾದ ಸ್ವರೂಪ” ಎನ್ನುತ್ತಾನೆ ಕೃಷ್ಣ.
