ಶ್ಲೋಕ – 24
ಅಗ್ನಿರ್ಜೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್ ।
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ।।
ಅಗ್ನಿ ಮತ್ತು ಜ್ಯೋತಿ [ಎಂಬಿಬ್ಬರು ವಹ್ನಿಯ ಮಕ್ಕಳು].[ಮಧ್ಯಾಹ್ನದ ದೇವತೆಯ ಜತೆ] ಹಗಲಿನ ದೇವತೆ, [ಹುಣ್ಣಿಮೆಯ ದೇವತೆ ಜತೆ] ಶುಕ್ಲಪಕ್ಷದ ದೇವತೆ , ಉತ್ತರಾಯಣದ ಆರು ತಿಂಗಳ ದೇವತೆಗಳು, [ಸಂಕ್ರಾಂತಿಯ ದೇವತೆಯ ಜತೆ] ಉತ್ತರಾಯಣದ ದೇವತೆ- ಈ ದಾರಿಯಲ್ಲಿ ಹೋದವರು ಭಗವಂತನನ್ನು ಬಲ್ಲವರು ಭಗವಂತನನ್ನು ಸೇರುತ್ತಾರೆ; ಮತ್ತೆ ಮರಳುವುದಿಲ್ಲ.
ದೇಹದಿಂದ ಹೊರಬಂದ ಮೋಕ್ಷ ಯೋಗ್ಯ ಜೀವವನ್ನು ಮೊದಲು ಸ್ವಾಗತಿಸುವವರು ವೈಶ್ವಾನರ(ಪ್ರಧಾನ ಅಗ್ನಿ)ನ ಮಕ್ಕಳಾದ ಅಗ್ನಿ ಮತ್ತು ಜ್ಯೋತಿ. ಈ ದೇವತೆಗಳು ಜೀವನನ್ನು ಸತ್ಕರಿಸಿ ಮುಂದಕ್ಕೆ ಕಳುಹಿಸುತ್ತಾರೆ. ಮುಂದೆ ಜೀವನನ್ನು ಬೆಳಕಿನ ಮತ್ತು ಮಧ್ಯಾಹ್ನದ ದೇವತೆಗಳು ಸ್ವಾಗತಿಸುತ್ತಾರೆ. ಈ ನಿಜವಾದ ಬೆಳಕಿನ ಅನುಭವದೊಂದಿಗೆ ಜೀವ ಮುಂದೆ ಸಾಗಿ ಶುಕ್ಲಪಕ್ಷದ ಮತ್ತು ಹುಣ್ಣಿಮೆಯ ದೇವತೆಯನ್ನು ತಲುಪುತ್ತಾನೆ. ಆ ನಂತರ ಸಂಕ್ರಮಣದ, ಉತ್ತರಾಯಣದ ದೇವತೆ ಜೊತೆಗೆ ಉತ್ತರಾಯಣದ ಆರು ತಿಂಗಳ ದೇವತೆಗಳು ಜೀವನನ್ನು ಭಗವಂತನೆಡೆಗೆ ಕಳುಹಿಸುತ್ತಾರೆ. ಹೀಗೆ ಯಾರು ಈ ದಾರಿಯಲ್ಲಿ ಸಾಗುತ್ತಾರೆ ಅವರು ಎಂದೂ ಮರಳಿ ಬರುವುದಿಲ್ಲ-ನಿತ್ಯ ಸತ್ಯವಾದ ಭಗವಂತನನ್ನು ಸೇರುತ್ತಾರೆ.
ಹಿಂದಿನ ಶ್ಲೋಕ – ಭಗವದ್ಗೀತೆ ಅಧ್ಯಾಯ-8, ಶ್ಲೋಕ -23
