Bhagavad Gita
ಶ್ಲೋಕ – 02
ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ ।
ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್ ॥೨॥
ಉಚ್ಚಾರಣೆ ರಾಜವಿದ್ಯಾ ರಾಜಗುಹ್ಯಮ್ ಪವಿತ್ರಮ್ ಇದಮ್ ಉತ್ತಮಮ್ ।
ಪ್ರತ್ಯಕ್ಷ ಅವಗಮಮ್ ಧರ್ಮ್ಯಮ್ ಸು ಸುಖಮ್ ಕರ್ತುಮ್ ಅವ್ಯಯಮ್-
ಇದು ಅರಿವುಗಳ ಅರಸ. ಗುಟ್ಟುಗಳ ಗುಟ್ಟು. ಮಿಗಿಲಾದ ಅಪ್ಪಟ. ಕಣ್ಣಲ್ಲಿ ಕೂತವನ ಕಾಣಿಸುವ ದಾರಿ.
ಎಲ್ಲ ಹೊತ್ತವನನ್ನು ಕುರಿತದ್ದು. ಆಚರಿಸಲು ಆರಾಮ. ಅಳಿವಿಲ್ಲದ್ದು.
ಕೃಷ್ಣ ತಾನು ಮುಂದೆ ಉಪದೇಶ ಮಾಡಲಿರುವ ಅಧ್ಯಾತ್ಮ ವಿಜ್ಞಾನದ ಬಗ್ಗೆ ಹೇಳುತ್ತಾ ಹೇಳುತ್ತಾನೆ
“ಇದು ವಿದ್ಯೆಗಳಲ್ಲೆಲ್ಲಾ ಪ್ರಧಾನ ವಿದ್ಯೆ; ಅತ್ಯಂತ ರಹಸ್ಯವಾದ ಮತ್ತು ಪರಮ ಪವಿತ್ರವಾದ ವಿದ್ಯೆ” ಎಂದು.
ಪ್ರತ್ಯಕ್ಷ ಶಬ್ದವಾಚ್ಯನಾದ(ಇಂದ್ರಿಯ ನಿಯಾಮಕಗಿರುವ ) ಭಗವಂತನನ್ನು ಪ್ರತ್ಯಕ್ಷ ತೋರಿಸುವಂತಹ, ಜಗತ್ತಿನ ಧಾರಕ ಶಕ್ತಿಯಾದ ಭಗವಂತನನ್ನು ನೇರ ವಿಷಯೀಕರಿಸುವ ಸಾಕ್ಷಾತ್ ಭಗವದ್ ವಿಷಯಕವಾದ ವಿದ್ಯೆ. ಈ ವಿದ್ಯೆಯನ್ನು ತಿಳಿದು ಭಗವಂತನನ್ನು ಒಲಿಸಿಕೊಳ್ಳುವುದು ಬಹಳ ಸುಲಭ. ಏಕೆಂದರೆ ಭಗವಂತನಿಗೆ ಅತ್ಯಂತ ಪ್ರೀಯವಾದದ್ದು ಜ್ಞಾನ. ಭಗವಂತ ಜ್ಞಾನಕ್ಕೆ ಒಲಿದಷ್ಟು ಸುಲಭವಾಗಿ ಯಾವ ದಾರಿಗೂ ಒಲಿಯುವುದಿಲ್ಲ. “ಇದು ಅಳಿವಿರದ ದಾರಿ” ಎನ್ನುತ್ತಾನೆ ಕೃಷ್ಣ. ಆದ್ದರಿಂದ ಜ್ಞಾನದ ದಾರಿ ಎಂದೂ ವ್ಯರ್ಥವಲ್ಲ.
