ಶ್ಲೋಕ – 10
ಮಯಾSಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್।
ಹೇತುನಾSನೇನ ಕೌಂತೇಯ ಜಗದ್ ವಿಪರಿವರ್ತತೇ ॥೧೦॥
ಉಚ್ಚಾರಣೆ- ಮಯಾ ಅಧ್ಯಕ್ಷೇಣ ಪ್ರಕೃತಿಃ ಸೂಯತೇ ಸ ಚರ ಅಚರಮ್।
ಹೇತುನಾ ಅನೇನ ಕೌಂತೇಯ ಜಗತ್ ವಿಪರಿವರ್ತತೇ-
ಸಾಕ್ಷಿಯಾಗಿ ನಿಂತ ನನ್ನಿಂದಲೆ ಜೀವ-ಜಡಗಳನ್ನು ಬೆಸೆದು ಪ್ರಕೃತಿ ಹಡೆಯುತ್ತದೆ.
ಕೌಂತೇಯ, ಈ ಕಾರಣದಿಂದಲೆ ಜಗತ್ತು ಬದಲುತ್ತ ಸುತ್ತುತ್ತಿದೆ.
ಜಗತ್ತನ್ನು ಸೃಷ್ಟಿ ಮಾಡಲು ಬೇಕಾದ ಮೂಲದ್ರವ್ಯ ಜಡಪ್ರಕೃತಿ ಮತ್ತು ಅದಕ್ಕೆ ಆಕಾರ ಕೊಡುವುದು
ಜಡಪ್ರಕೃತಿಯ ಮಾನಿನಿಯಾದ ಚೇತನ ಪ್ರಕೃತಿ ಲಕ್ಷ್ಮಿ. ಭಗವಂತ ಇಡೀ ಸೃಷ್ಟಿಯ ಅಧ್ಯಕ್ಷನಾಗಿ ನಿಂತು,
ಕ್ರಿಯೆಯ ಹಿಂದಿನ ಶಕ್ತಿಯಾಗಿ, ಜಡ ಮತ್ತು ಚೇತನಪ್ರಕೃತಿಯ ಮೂಲಕ ಈ ಸೃಷ್ಟಿ ನಿರ್ಮಾಣ ಮಾಡುತ್ತಾನೆ.
ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಕೂಡಾ ಒಂದು ವಿಶಿಷ್ಟ ಶಕ್ತಿಯಾಗಿ ಭಗವಂತ ತುಂಬಿದ್ದಾನೆ.
