ಶ್ಲೋಕ – 11
ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ ।
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್ ॥೧೧॥
ಉಚ್ಚಾರಣೆ- ಅವಜಾನಂತಿ ಮಾಮ್ ಮೂಢಾಃ ಮಾನುಷೀಂ ತನುಮ್ ಆಶ್ರಿತಮ್ ।
ಪರಮ್ ಭಾವಮ್ ಅಜಾನಂತಃ ಮಮ ಭೂತಮಹೇಶ್ವರಮ್-
ಮನುಷ್ಯರಂತೆ ಕಾಣಿಸಿಕೊಂಡು ಮೈದಾಳಿದ ನನ್ನನ್ನು ಮನುಷ್ಯನೆಂದೆ ಬಗೆದು ಕಡೆಗಾಣಿಸುತ್ತಾರೆ
ಎಂದೆಂದು ಎಲ್ಲೆಡೆಯು ಇರುವ ಹಿರಿದಕ್ಕು ಹಿರಿದಾದ ನನ್ನ ಹಿರಿಮೆಯನ್ನರಿಯದ ತಿಳಿಗೇಡಿಗಳು.
ಈ ಶ್ಲೋಕದಲ್ಲಿ ಭಗವಂತ ತನ್ನ ಸ್ವರೂಪದ ಬಗ್ಗೆ ಇನ್ನ್ಯಾರೂ ಹೇಳಲಾಗದ ಒಂದು ಸಂಗತಿಯನ್ನು ಹೇಳುತ್ತಾನೆ.
ಭಗವಂತನಿಗೆ ಪಾಂಚಭೌತಿಕ ಶರೀರವಿಲ್ಲ. ಅವತಾರ ರೂಪಿ ಭಗವಂತ ನಮಗೆ ನಮ್ಮಂತೇ ಶರೀರ ಉಳ್ಳವನಂತೆ ಕಾಣಿಸಿಕೊಳ್ಳುತ್ತಾನೆ ಅಷ್ಟೇ.
ಅಲ್ಲಿ ಕಾಣುವ ಶರೀರವನ್ನು ಕಂಡು.
ಭಗವಂತನ ಶರೀರ ನಮ್ಮಂತೆ ನಶ್ವರವಾದ, ಒಂದು ದಿನ ಬಿದ್ದು ಹೋಗುವ ಶರೀರ ಎಂದು ತಿಳಿಯುವವರು-
ಸ್ವಭಾವತಃ ತಾಮಸರು ಅಥವಾ ತಾಮಸದ ಪ್ರಭಾವಕ್ಕೆ ಒಳಗಾದ ಭಗವಂತನ ಹಿರಿಮೆಯನ್ನರಿಯದ ತಿಳಿಗೇಡಿಗಳು ಎನ್ನುತ್ತಾನೆ ಕೃಷ್ಣ.
ಇಲ್ಲಿ ಭೂತಮಹೇಶ್ವರ ಎನ್ನುವ ವಿಶೇಷಣ ಬಳಕೆಯಾಗಿದೆ. ಇದು ಭಗವಂತನ ಹಿರಿಮೆಯನ್ನು ಹೇಳುವ ವಿಶೇಷ ಪದ.
ಸಮಷ್ಟಿಯಾಗಿ ಈ ಪದವನ್ನು ನೋಡಿದರೆ: ಭೂತಗಳು ಎಂದರೆ ಸಮಸ್ತ ಜೀವಗಳು.
ಅವರಿಗೆ ಈಶರು ಬ್ರಹ್ಮಾದಿ ದೇವತೆಗಳು(ಭೂತೇಶರು).ಈ ದೇವತೆಗಳಿಗೆ ಮಹತ್ತಾದವಳು ಶ್ರೀಲಕ್ಷ್ಮಿ(ಭೂತಮಹೇಶಳು).
ಇಂತಹ ಲಕ್ಷ್ಮಿಗೆ ವರನಾಗಿರುವ ಭಗವಂತ “ಭೂತಮಹೇಶ್ವರ”.
ಇದೇ ಪದವನ್ನು ಬಿಡಿಸಿ ನೋಡಿದರೆ ಭೂತಮಹಾನ್+ಈಶ್ವರ : ಅಂದರೆ ಬ್ರಹ್ಮಾದಿ ಸಮಸ್ತ ಭೂತಗಳಿಗೂ ಮಹಾನ್ ಆಗಿ ಎಲ್ಲರನ್ನು ನಿಯಂತ್ರಿಸುವ ,
ಸರ್ವೋನ್ನತನಾದ- ಸರ್ವಸಮರ್ಥ ಭಗವಂತ.
ಇನ್ನೊಂದು ರೀತಿಯಲ್ಲಿ ಭೂತ+ಮಹತ್+ಈಶ್ವರ.
ಇಲ್ಲಿ ಭೂತ ಎಂದರೆ: ಉನ್ನತಿಯ ತುತ್ತ ತುದಿಯಲ್ಲಿರುವ,
ಹುಟ್ಟು ಸಾವಿಲ್ಲದ ಅನಾಧಿನಿತ್ಯ. ಮಹತ್ ಎಂದರೆ: ಕಾಲತಃ , ದೇಶತಃ, ಗುಣತಃ ಪರಿಪೂರ್ಣವಾಗಿರುವ ತತ್ತ್ವ.
ಈಶ್ವರ ಎಂದರೆ : ಸರ್ವ ಸಮರ್ಥ ಭಗವಂತ.
ಹೀಗೆ ಈ ವಿಶೇಷಣ ಅನೇಕ ರೂಪದಲ್ಲಿ ಭಗವಂತನ ಗುಣವನ್ನು ಸಾರುತ್ತದೆ.
