ಶ್ಲೋಕ – 19
ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ ।
ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ ॥೧೯॥
ನಾನು ಸುಡುತ್ತೇನೆ. ನಾನು ಮಳೆ ಬರದಂತೆ ತಡೆಯುತ್ತೇನೆ; ಮಳೆಗರೆಸುತ್ತೇನೆ. ಸಾವು ಬರದಂತೆ ಮಾಡುತ್ತೇನೆ; ಸಾಯಿಸುತ್ತೇನೆ. ಓ ಅರ್ಜುನ, ಕಾಣುವ ಕಾರ್ಯ, ಕಾಣದ ಕಾರಣ ಎಲ್ಲವೂ ನನ್ನಿಂದ.[ಸದ್ಗುಣಗಳ ಸೆಲೆಯಾದ್ದರಿಂದ ನಾನು ‘ಸತ್’. ನನ್ನಂಥವ ಇನ್ನೊಬ್ಬ ಇರದ್ದರಿಂದ ನಾನು ‘ಅಸತ್’]
ಸೂರ್ಯನಲ್ಲಿ ಸನ್ನಿಹಿತನಾಗಿ, ಭೂಮಿಗೆ ಸೌರಶಕ್ತಿಯನ್ನು ಹರಿಸಿ, ಬದುಕು ಕೊಟ್ಟವ ಭಗವಂತ. ಕಾಲ ಕಾಲಕ್ಕೆ ಮಳೆ ಬರುವಂತೆ ಮಾಡುವವನೂ ಅವನೆ, ಅಕಾಲದಲ್ಲಿ ಮಳೆ ಬಾರದಂತೆ ತಡೆಯುವವನೂ ಅವನೆ. ಮಳೆ ಬರಬೇಕಾದಾಗ ಬಾರದೇ ಇರುವುದು, ಮಳೆ ಬರಬಾರದಾಗ ಬರುವುದೂ ಭಗವಂತನನಿಂದಲೆ. ಕಾಣುವ ಕ್ರಿಯೆಯ ಹಿಂದಿನ ಕಾರಣಶಕ್ತಿ ಭಗವಂತ.
ಭಗವಂತ ನಮ್ಮ ಬದುಕಿನಲ್ಲಿ ಉಸಿರು ಕೊಟ್ಟು ಬದುಕಿಸುವ ಅಮೃತ. ಆಯಸ್ಸು ಮುಗಿದಾಗ ಉಸಿರು ನಿಲ್ಲಿಸಿ ಕರೆಸಿ ಕೊಳ್ಳುವವನೂ ಅವನೆ. ಒಟ್ಟಿನಲ್ಲಿ ಕೃಷ್ಣ ಹೇಳುತ್ತಾನೆ “ಕಣ್ಣಿಗೆ ಕಾಣುವ (ಸತ್), ಕಣ್ಣಿಗೆ ಕಾಣದ (ಅಸತ್) ಸಮಸ್ತ ಪ್ರಪಂಚವನ್ನು ನಿರ್ವಹಿಸುವ ಶಕ್ತಿ ನಾನು” ಎಂದು. ಇದು ಕೃಷ್ಣ ಸೂಕ್ಷ್ಮವಾಗಿ ಭಗವಂತನ ಅನುಸಂಧಾನಕ್ಕೆ ಕೊಟ್ಟಿರುವ ಸಮಗ್ರ ಚಿತ್ರಣ. ಇಲ್ಲಿ ಪೂರ್ಣ ಪ್ರಮಾಣದಲ್ಲಿ ಭಗವಂತನ ಅನುಸಂಧಾನಕ್ಕೆ ಬೇಕಾದ ಸಮಗ್ರ ಸಂಗತಿ ಅಡಗಿದೆ.
ಮುಂದೆ ಕೃಷ್ಣ ತನ್ನ ಭಕ್ತರಲ್ಲಿ(ಜ್ಞಾನಿಗಳಲ್ಲೇ) ಪ್ರಮುಖವಾಗಿ ಎರಡು ವಿಧದ ಭಕ್ತರ ಬಗ್ಗೆ ವಿವರಿಸುತ್ತಾನೆ. ಅವರೆಂದರೆ ತ್ರೈವಿದ್ಯರು ಮತ್ತು ಭಾಗವತರು.
