ಶ್ಲೋಕ – 22
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ।
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ॥೨೨॥
ಬೇರೆಲ್ಲಾ ತೊರೆದು ನನ್ನನ್ನೆ ನೆನೆಯುತ್ತ ಪರಿಪರಿಯಿಂದ ಪೂಜಿಸುವ ಜನರು ಎಲ್ಲೆಲ್ಲು ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು.
ಭಾಗವತರು ಯಾವುದನ್ನೂ ಬೇಕು ಎಂದು ಬಯಸುವುದಿಲ್ಲ. ಅವರಿಗೆ ಭಗವಂತನ ಚಿಂತನೆಯೊಂದನ್ನು ಬಿಟ್ಟರೆ ಬೇರೆ ಚಿಂತನೆಯೇ ಇಲ್ಲ. ಇವರು ಅನನ್ಯವಾಗಿ ಭಗವಂತನನ್ನು ಮಾತ್ರ ಬಯಸುತ್ತಾರೆ. ಯಾವುದೋ ಬಯಕೆಗೆ ಕಟ್ಟು ಬಿದ್ದು ಅವರು ಪೂಜೆ ಮಾಡುವುದಿಲ್ಲ. ಇವರು ಭಗವಂತನಲ್ಲದೆ ಇನ್ನ್ಯಾವುದೇ ದೇವತೆಯನ್ನು ಪ್ರಧಾನವಾಗಿಟ್ಟುಕೊಂಡು ಆಹುತಿ ಕೊಟ್ಟು ಆರಾಧನೆ ಮಾಡುವುದಿಲ್ಲ. ಎಲ್ಲ ದೇವತೆಯ ಒಳಗೂ ಇವರು ಕೇವಲ ಭಗವಂತನನ್ನು ಕಾಣುತ್ತಾರೆ. ಇದು ಏಕಭಕ್ತಿ-ಪರಮಾತ್ಮನನ್ನು, ಮೋಕ್ಷವನ್ನು ಸೇರಲು ಅನುಸರಿಸಬೇಕಾದ ಮಾರ್ಗ.
ನಾವು ಪೂಜೆ ಮಾಡಿಸಿದಾಗ ಸಂಕಲ್ಪ ಮಾಡಿಸುತ್ತಾರೆ. ಇಲ್ಲಿ ನಾವು ಎಂದೂ ನಮ್ಮ ಐಹಿಕ ಬಯಕೆಗಳನ್ನು ಭಗವಂತನ ಮುಂದಿಡಬಾರದು. ಕೇವಲ ಜ್ಞಾನ, ಭಕ್ತಿ, ಮೋಕ್ಷ- ಇದು ನಮ್ಮ ಸಂಕಲ್ಪವಾಗಿರಬೇಕು. ನಶ್ವರವಾದ ಬಯಕೆಗಳನ್ನು ಮುಂದಿಟ್ಟು ಪೂಜೆ ಮಾಡಿಸಿದಾಗ ನಾವು ಮಹತ್ತಾದ ಫಲವನ್ನು ಕಳೆದುಕೊಳ್ಳುತ್ತೇವೆ. ನಮಗೆ ಏನು ಬೇಕು ಏನು ಬೇಡ ಎನ್ನುವುದು ಆ ಭಗವಂತನಿಗೆ ನಮಗಿಂತ ಚನ್ನಾಗಿ ಗೊತ್ತು ಮತ್ತು ಆತ ಎಂದೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ. ಪೂಜೆ ಕೇವಲ ಭಗವಂತನ ಪ್ರೀತ್ಯಾರ್ಥವಾಗಿ ಮಾಡಿ ಆತನಲ್ಲಿ ಅನನ್ಯ ಭಕ್ತಿ ನೆಟ್ಟಾಗ ಭಗವಂತ ನಮ್ಮನ್ನು ಪ್ರೀತಿಸುತ್ತಾನೆ. ಕೃಷ್ಣ ಹೇಳುತ್ತಾನೆ “ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್” ಇಂತಹ ಭಕ್ತರ ಯೋಗಕ್ಷೇಮದ ಹೊಣೆ ನನ್ನದು ಎಂದು. ಇದಕ್ಕಿಂತ ಹೆಚ್ಚಿನ ಭರವಸೆ ಏನು ಬೇಕು?
ನಾವು ಗಾಢವಾಗಿ “ಭಗವಂತ ನಮ್ಮನ್ನು ರಕ್ಷಿಸಿಯೇ ರಕ್ಷಿಸುತ್ತಾನೆ” ಎಂದು ಗಟ್ಟಿಯಾಗಿ ನಂಬಿದರೆ ಆತ ರಕ್ಷಿಸಿಯೇ ರಕ್ಷಿಸುತ್ತಾನೆ. ಭಗವಂತನ ಮೇಲಿನ ನಮ್ಮ ನಂಬಿಕೆಯಲ್ಲಿ ನಾವು ಎಂದೂ ವಿಚಲಿತರಾಗಬಾರದು. ಅದು ದೃಢವಾಗಿರಬೇಕು. ಗುರಿ ಕೇವಲ ಭಗವಂತನನ್ನು ಸೇರುವತ್ತ ಇರಬೇಕು. ಭಗವಂತ ಏನು ಕೊಟ್ಟನೋ ಅದೇ ಮಹಾ ಪ್ರಸಾದವೆಂದು ಸ್ವೀಕರಿಸಿ ಸಂಪೂರ್ಣ ಆತನಲ್ಲಿ ಶರಣಾಗಬೇಕು. ಇಂತಹ ಸ್ಥಿತಿಯಲ್ಲಿ ನಮಗೆ ಎಂದೂ ದುಃಖವಾಗುವುದಿಲ್ಲ. ಬದುಕು ಆನಂದಮಯವಾಗಿರುತ್ತದೆ. ಜೀವನದಲ್ಲಿ ಏನೇ ಘಟನೆ ನಡೆದರೂ “ಭಗವಂತನ ಚಿತ್ತದಂತೆ ಆಯಿತು” ಎಂದು ತಿಳಿದು ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋವೃತ್ತಿ ನಮ್ಮದಾಗಬೇಕು. ಇದು ಮೋಕ್ಷದ ಹೆಬ್ಬಾಗಿಲು.
