ಶ್ಲೋಕ – 32
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇSಪಿ ಸ್ಯುಃ ಪಾಪಯೋನಯಃ ।
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇSಪಿ ಯಾಂತಿ ಪರಾಂ ಗತಿಮ್ ॥೩೨॥
ಪಾರ್ಥ, ನನಗೆ ಶರಣು ಬಂದವರು ಯಾವುದೋ ಪಾಪದಿಂದ ಹೆಣ್ಣಾಗಿ, ವೈಶ್ಯರಾಗಿ, ಶೂದ್ರರಾಗಿ ಸಾಧನೆಯಿಂದ ವಂಚಿತರಾದರೂ ಹಿರಿಯ ನೆಲೆಯಾದ ನನ್ನನ್ನೆ ಪಡೆಯುತ್ತಾರೆ.
ಈ ಶ್ಲೋಕ ಕೆಲವು ಭಾಷ್ಯಕಾರರಿಗೇ ಗೊಂದಲ ಮಾಡಿದ ಶ್ಲೋಕ. ಮಧ್ವಾಚಾರ್ಯರು ಈ ಶ್ಲೋಕಕ್ಕೆ ಭಾಷ್ಯ ನೀಡುವ ತನಕ ಹೆಚ್ಚಿನವರು ಇದಕ್ಕೆ ತಪ್ಪು ಅರ್ಥವನ್ನು ಕಲ್ಪಿಸಿಕೊಂಡಿದ್ದರು. ಮೇಲ್ನೋಟದಲ್ಲಿ ಈ ಶ್ಲೋಕವನ್ನು ನೋಡಿದಾಗ “ಸ್ತ್ರೀಯರು, ವೈಶ್ಯರು ಮತ್ತು ಶೂದ್ರರು ಪಾಪಿಗಳು” ಎಂದು ತಿಳಿಯುವ ಅಪಾಯ ಹೆಚ್ಚು. ಇಲ್ಲಿ ಕೃಷ್ಣ ಹೇಳುತ್ತಿರುವುದು ಸ್ತ್ರೀ ಜೀವದ ಬಗ್ಗೆ ಅಲ್ಲ. ಸ್ತ್ರೀಯರು ಪಾಪಿಗಳಲ್ಲ. ಯಾವುದೋ ಪಾಪದಿಂದ ಅಥವಾ ಶಾಪದಿಂದ ಸ್ತ್ರೀ ಜನ್ಮ ಪಡೆದ ಗಂಡು ‘ ಸ್ತ್ರೀ ಪಾಪಯೋನಿ’ ಹೊರತು ಹೆಣ್ಣಾಗಿರುವ ಸ್ತ್ರೀಜೀವ ಪಾಪಯೋನಿಯಲ್ಲ.
ಕೃಷ್ಣ ಹೇಳುತ್ತಾನೆ “ಯಾವುದೋ ಪಾಪದಿಂದ ಹೀನಯೋನಿ ಬಂದಿರಬಹುದು, ಆದರೆ ಅಂತವರು ನನ್ನನ್ನು ಆರಾಧಿಸಿ ಎಲ್ಲಾ ದೋಷಗಳಿಂದ ಬಿಡುಗಡೆ ಹೊಂದಬಹುದು” ಎಂದು. ಇದಕ್ಕೆ ಉತ್ತಮ ದೃಷ್ಟಾಂತ ನರಕಾಸುರನ ಸೆರೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ಸ್ತ್ರೀಯರು. ಇವರು ಅಗ್ನಿ ಪುತ್ರರು. ಭಗವಂತನ ಪತ್ನಿಯರಾಗಬೇಕು ಎಂಬ ಆಸೆಯಿಂದ ತಮ್ಮ ಎತ್ತರವನ್ನು ಕಳೆದುಕೊಂಡು ಭೂಮಿಯಲ್ಲಿ ಹೆಣ್ಣಾಗಿ ಹುಟ್ಟಿ ನರಕಾಸುರನ ಸೆರೆಮನೆಯಲ್ಲಿ ಸಿಕ್ಕಿ ಒದ್ದಾಡಿದವರು. ಕೃಷ್ಣ ಅವರನ್ನು ಮದುವೆಯಾಗಿ ಉದ್ಧರಿಸಿದ.
ನಂದಗೋಪ ಮತ್ತು ಯಶೋದೆ ಇವರು ಮೂಲತಃ ದೇವಾಂಶ ಸಂಭೂತರು. ‘ದ್ರೋಣ’ ನಾಮಕ ವಸು ನಂದಗೋಪ ಮತ್ತು ‘ಧರ’ ನಾಮಕ ವಸುಪತ್ನಿ ಯಶೋದೆ. ಅವರು ಭೂಮಿಯಲ್ಲಿ ವೈಶ್ಯರಾಗಿ ಹುಟ್ಟಿದರು. ಭಗವಂತ ತನ್ನ ಅವತಾರದಲ್ಲಿ ಅವರ ಮನೆಯಲ್ಲಿ ಬೆಳೆದು ಅವರನ್ನು ಉದ್ಧರಿಸಿದ.
ಮಹಾ ಚೇತನ ವಿಧುರ. ಈತ ಸ್ವಯಂ ಧರ್ಮರಾಯ. ಶಾಪದ ಫಲವಾಗಿ ಭೂಮಿಯಲ್ಲಿ ಶೂದ್ರನಾಗಿ ಬದುಕಬೇಕಾಗಿ ಬಂತು. ಸಂಧಾನಕ್ಕೆ ಬಂದ ಕೃಷ್ಣ ದುರ್ಯೋಧನ, ಭೀಷ್ಮ, ದ್ರೋಣರ ಮನೆಗೆ ಹೋಗದೆ ನೇರವಾಗಿ ವಿಧುರನ ಮನೆಗೆ ಬಂದು ಅಲ್ಲಿ ವಿಧುರನಿಂದ ಸರಳ ಆಹಾರ ಸೇವಿಸಿ ಆತನನ್ನು ಪ್ರಸನ್ನನಾಗಿ ಮಾಡಿದ. ಇಲ್ಲಿ ಭಗವಂತ ಬಯಸುವುದು ಪ್ರದರ್ಶನವನ್ನಲ್ಲ ಬದಲಿಗೆ ಪ್ರೀತಿಯನ್ನು ಎನ್ನುವುದು ಸ್ಪಷ್ಟವಾಗುತ್ತದೆ. ಆತನಿಗೆ ಅಂತರಾತ್ಮ ಮುಖ್ಯ, ಮುಖವಾಡವಲ್ಲ.
ಹೀಗೆ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ “ಯಾವುದೋ ಪಾಪ ಕರ್ಮದಿಂದ ಅಥವಾ ಶಾಪದಿಂದ ಹೀನಯೋನಿಯಾಗಿ ಹುಟ್ಟಿದವರು ನನ್ನನ್ನು ಆಶ್ರಯಿಸಿದಾಗ ಪಾಪದಿಂದ ಕಳಚಿಕೊಂಡು ನನ್ನನ್ನು ಸೇರುತ್ತಾರೆ” ಎಂದು.
