
ಅಧ್ಯಾಯ-1
ಶ್ಲೋಕ – 20
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ ॥೨೦॥
ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ ।
ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ ಪ್ರವೃತ್ತೇ ಶಸ್ತ್ರಸಂಪಾತೇ ಧನುಃ ಉದ್ಯಮ್ಯ ಪಾಂಡವಃ ಹೃಷೀಕೇಶಮ್ ತದಾ ವಾಕ್ಯಮ್ ಇದಮ್ ಆಹ ಮಹೀಪತೇ –
ಓ ದೊರೆಯೇ, ಹನುಮನ ಬಾವುಟದ ಅರ್ಜುನ ಧಾರ್ತರಾಷ್ಟ್ರರು ಸಜ್ಜಾದದ್ದನ್ನು ಕಂಡು, ಹೋರಾಟಕ್ಕೆ ತೊಡಗಲು ತನ್ನ ಬಿಲ್ಲನ್ನು ಅಣಿಗೊಳಿಸಿ, ಕೃಷ್ಣನನ್ನು ಕುರಿತು ಈ ಮಾತನ್ನು ಹೇಳಿದನು.
ಎರಡೂ ಕಡೆ ಶಂಖನಾದವಾದಾಗ ಯುದ್ಧ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ, ತನ್ನ ರಥದಲ್ಲಿ ಆಂಜನೇಯನ ವಿಶೇಷ ಸನ್ನಿಧಾನವುಳ್ಳ ಅರ್ಜುನನು, ಇಂದ್ರಿಯಗಳ ಒಡೆಯನಾದ ಶ್ರೀಕೃಷ್ಣ(ಹೃಷೀಕೇಶ)ನಲ್ಲಿ ಮಾತನ್ನಾಡಿದನು.
ಇಲ್ಲಿ ಅರ್ಜುನನ ರಥದಲ್ಲಿ ಪ್ರಾಣದೇವರ ವಿಶೇಷ ಸನ್ನಿಧಾನವಿತ್ತು. ನಮ್ಮ ದೇಹವೆಂಬ ರಥದಲ್ಲಿ ಕೂಡಾ ಜೀವನನ್ನು ಸದಾ ಪ್ರಾಣ ‘ಭಗವಂತನ ಸನ್ನಿಧಾನದಲ್ಲಿ‘ ರಕ್ಷಿಸುತ್ತಿರುತ್ತಾನೆ. ಏಲ್ಲಿ ಪ್ರಾಣನೋ ಅಲ್ಲಿ ಭಗವಂತನ ಸನ್ನಿಧಾನ. ಪೌರಾಣಿಕವಾಗಿ ಅರ್ಜುನನ ರಥದಲ್ಲಿ ಆಂಜನೇಯನ ಸನ್ನಿಧಾನವಿರಲು ಕಾರಣ ವಾಯು ದೇವರ ಇನ್ನೊಂದು ರೂಪವಾದ ಭೀಮಸೇನ. ಸೌಗಂಧಿಕಾ ಪುಷ್ಪ ತರಲು ಹೊರಟ ಭೀಮಸೇನನನ್ನು ಹನುಮಂತ ಬಾಲದಿಂದ ತಡೆದ. ಈ ಸಂದರ್ಭದಲ್ಲಿ ನಡೆದ ಘಟನೆಯಲ್ಲಿ ಆಂಜನೇಯ ತಾನು ವಿಶೇಷವಾಗಿ ಅರ್ಜುನನ ರಥದಲ್ಲಿ ಸನ್ನಿಹಿತನಾಗಿರುತ್ತೇನೆ ಎಂದು ಭೀಮಸೇನನಿಗೆ ಮಾತು ಕೊಟ್ಟಿರುತ್ತಾನೆ. ಇಲ್ಲಿ ಭೀಮಸೇನ ಹಾಗು ಆಂಜನೇಯ ಎನ್ನುವುದು ಪ್ರಾಣದೇವರ ಎರಡು ರೂಪ (ರಾಮ ಮತ್ತು ಪರಶುರಾಮ ಇದ್ದಂತೆ).
ತನ್ನ ಧ್ವಜದಲ್ಲಿ ಆಂಜನೇಯನ ಸನ್ನಿಧಾನ, ಕೈಯಲ್ಲಿ ಗಾಂಡೀವ, ರಥದ ಸಾರಥಿ ಕೃಷ್ಣ, ಜೊತೆಯಲ್ಲಿ ಮಹಾ ಪರಾಕ್ರಮಿ ಭೀಮಸೇನ. ಈ ರೀತಿ ಯುದ್ಧಕ್ಕೆ ಸಜ್ಜಾದ ಅರ್ಜುನನನ್ನು ಅಹಂಕಾರ(Ego) ಕಾಡುತ್ತದೆ. ಈ ಅಹಂಕಾರದಿಂದ ಆತ ಕೃಷ್ಣನನ್ನು ಕುರಿತು ಹೀಗೆ ಹೇಳುತ್ತಾನೆ: