ಅಧ್ಯಾಯ-1
ಶ್ಲೋಕ – 28-29
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ ।
ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ॥೨೯॥
ಅರ್ಜುನ ಉವಾಚ ದೃಷ್ವಾ ಇಮಮ್ ಸ್ವಜನಮ್ ಕೃಷ್ಣ ಯುಯುತ್ಸುಮ್ ಸಮುಪಸ್ಥಿತಮ್ ಸೀದಂತಿ ಮಮ
ಗಾತ್ರಾಣಿ ಮುಖಮ್ ಚ ಪರಿಶುಷ್ಯತಿ ವೇಪಥುಃ ಚ ಶರೀರೇ ಮೇ ರೋಮ ಹರ್ಷಃ ಚ ಜಾಯತೇ-
ಅರ್ಜುನ ಹೇಳಿದನು: ಕೃಷ್ಣ, ಯುದ್ಧೋತ್ಸಾಹದಿಂದ ಇಲ್ಲಿ ನೆರೆದ ನಮ್ಮ ಮಂದಿಯನ್ನು ನೋಡಿದಾಗ ನನ್ನ ಅಂಗಾಂಗಗಳು ಕಂಗೆಡುತ್ತಿವೆ.
ಬಾಯಿಯೂ ಬತ್ತುತ್ತಿದೆ. ನನ್ನ ಮೈಯಲ್ಲವೂ ನವಿರೆದ್ದು ನಡುಗುತ್ತಿದೆ.
“ಇಲ್ಲಿ ನೆರೆದ ನನ್ನ ಹಿರಿಯ ಬಂಧುಗಳನ್ನು ನೋಡಿದಾಗ ನನ್ನ ಅಂಗಾಂಗಗಳು ಮುದುಡುತ್ತಿವೆ. ನಾವು ಪರಸ್ಪರ ಸ್ನೇಹಪೂರ್ವಕವಾಗಿ ಬದುಕಬೇಕಾದವರು ಇಂದು ಈ ರಣರಂಗದಲ್ಲಿ ಎದುರುಬದುರಾಗಿ ಹೊಡೆದಾಡಿಕೊಳ್ಳಲು ನಿಂತಿರುವುದನ್ನು ಕಂಡು ನನ್ನ ಮುಖ ನಾಚಿಕೆಯಿಂದ ಬಾಡುತ್ತಿದೆ. ತಿಳುವಳಿಕೆಯುಳ್ಳ ನಾವೇ ಇಂತಹ ಅಸಹ್ಯ ಕೆಲಸಕ್ಕೆ ಇಳಿದುಬಿಟ್ಟೆವಲ್ಲ. ಈ ತೀರ್ಮಾನವನ್ನು ನಾವೇ ಮಾಡಿ ಅದಕ್ಕೆ ನಾವೇ ಬದ್ಧರಾಗಿ ರಣರಂಗದಲ್ಲಿ ನಿಂತಿದ್ದೇವಲ್ಲ. ಇದನ್ನು ಯೋಚಿಸಿದರೆ ಮೈ ಮುದುಡುತ್ತಿದೆ. ಮುಖ ಒಣಗಿ ಮಾತನಾಡಲು ಆಗುತ್ತಿಲ್ಲ. ಎಷ್ಟು ಕೆಳಮಟ್ಟಕ್ಕಿಳಿದೆವು ನಾವು. ಇದನ್ನು ಯೋಚಿಸಿದರೆ ನಡುಕ ಬರುತ್ತದೆ” ಎನ್ನುತ್ತಾನೆ.
ಇಲ್ಲಿ ಅರ್ಜುನನ ಮಾತಿನಲ್ಲಿ ಮೊದಲು ಅನುಕಂಪ, ಅದರಿಂದ ಲಜ್ಜೆ, ಅದರಿಂದ ಭಯ, ಅದರಿಂದ ವಿಸ್ಮಯ ವ್ಯಕ್ತವಾಗಿರುವುದನ್ನು ನಾವು ಕಾಣುತ್ತೇವೆ.
