ರಾಮನಾಥಪುರ, ಮಾ.30: ಸನಾತನ ಧರ್ಮ ಹಾಗೂ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಭರತನಾಟ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿ, ಉಲ್ಲಾಸ ಮತ್ತು ಆಧ್ಯಾತ್ಮಿಕ ತೃಪ್ತಿ ನೀಡುತ್ತವೆ ಎಂದು ಶ್ರೀರಾಮ ಸೇವಾ ಸಮಿತಿ ಸದಸ್ಯರಾದ ವಕೀಲ ಶ್ರೀವತ್ಸಲ ಹೇಳಿದರು.

ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ ಸಂಗೀತೋತ್ಸವದ 4ನೇ ದಿನದ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಬೆಂಗಳೂರು ಅರೋಹಣ ನೃತ್ಯ ಶಾಲೆಯ ವಿ. ಶ್ರೀಮತಿ ಭಾರ್ಗವಿ ಹಾಗೂ ತಂಡ ಭಕ್ತಿರಸದ ಭರತನಾಟ್ಯ ಪ್ರದರ್ಶನ ನೀಡಿ, ನೆರೆದಿದ್ದ ಭಕ್ತರು ಮತ್ತು ಕಲಾಭಿಮಾನಿಗಳ ಮನಸೂರೆಗೊಂಡರು. ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಒಟ್ಟುಗೂಡಿಸಿದ ನೃತ್ಯಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀವತ್ಸಲ ಅವರು, ಸಂಗೀತ, ಸಾಹಿತ್ಯ, ಭರತನಾಟ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಬಿತ್ತುತ್ತವೆ. ತಂದೆ-ತಾಯಿ, ಗುರು-ಹಿರಿಯರಂತಹ ಪೂಜ್ಯ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಇಂದಿನ ಸೇವಾಕರ್ತರಾದ ಬೆಂಗಳೂರು ಶೇಷಾದ್ರಿಪುರಂನ ದಿ. ಎಚ್.ಟಿ. ವರದರಾಜನ್ ಕುಟುಂಬ, ಅನೇಕಲ್ನ ಶ್ರೀ ಮಂಜುನಾಥಶಾಸ್ತ್ರಿ, ಎಂ.ವಿ. ನಾಗರಾಜ್ ಸೇರಿದಂತೆ ಹಲವರು ಆಗಮಿಸಿದ್ದ ಕಲಾಭಿಮಾನಿಗಳು ಹಾಗೂ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದರು.

ದೇವಾಲಯದ ಮುಖ್ಯ ಅರ್ಚಕರಾದ ಶ್ರೀನಿವಾಸ್ ಅವರು ಉತ್ಸವ ಹಾಗೂ ಪೂಜಾಕೈಂಕರ್ಯಗಳನ್ನು ನೆರವೇರಿಸಿದರು.
ವರದಿ- ಕುಮಾರಸ್ವಾಮಿ ಎ.ಎನ್.
