ಸಕಲೇಶಪುರ, ಮಾ.22: ತಾಲೂಕು ಹಾನುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುದಶಕಗಳ ಬೇಡಿಕೆಯಾಗಿದ್ದ ಅಗನಿ ಮುಖ್ಯ ರಸ್ತೆಯಿಂದ ಮಲ್ಲದೀಣೆ ಮತ್ತು ಗುಡ್ಡದ ಮಠ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಗ್ರಾಮಸ್ಥರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿ ಕೈಗೆತ್ತಿಕೊಳ್ಳಲಾಗಿರುವ ಈ ರಸ್ತೆ ಕಾಮಗಾರಿ 1 ಕೋಟಿ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಗ್ರಾಮೀಣ ಭಾಗದ ಜನರಿಗೆ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಲಿದೆ.
ಈ ರಸ್ತೆ ನಿರ್ಮಾಣದಿಂದ ಮಲ್ಲದೀಣೆ ಹಾಗೂ ಗುಡ್ಡದ ಮಠ ಗ್ರಾಮಗಳ ಜನರಿಗೆ ಮುಖ್ಯರಸ್ತೆ ಸಂಪರ್ಕ ಸುಲಭವಾಗಲಿದ್ದು, ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
