ಭೈರಪ್ಪ ಅವರು ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಒಂದು ವಾದ, ಒಂದು ಸಿದ್ಧಾಂತ, ಒಂದು ನಿಲುವು ಮತ್ತು ಒಂದು ಧೋರಣೆ. ನಾನು ಗಮನಿಸಿದಂತೆ ಭೈರಪ್ಪನವರ ವಿರೋಧಿಗಳು ಅವರನ್ನು ಎದುರಿಸುವುದಕ್ಕೆ ಬಂದರೆ, ಭೈರಪ್ಪನ ವರು ಅವರನ್ನು ನಿಶಸ್ತ್ರರನ್ನಾಗಿ ಮಾಡಿಬಿಡುವ, ಅಗಾಧವಾದ ಸಿದ್ಧತೆ ಇರುವ ಲೇಖಕರಾಗಿದ್ದರು.
ನಾನು ಗಮನಿಸಿದಂತೆ ಎಷ್ಟೋ ಜನ ಲೇಖಕರು ಭೈರಪ್ಪನವರ ಬಗ್ಗೆ ಒಂದು ಪೂರ್ವಾಗ್ರಹ ನಿಲುವು ಇಟ್ಟುಕೊಂಡಿದ್ದರು. ಅವರು ಲೇಖಕರೇ ಅಲ್ಲ, ಅವರು ಬರೀ ಅಡ್ವೊಕೇಟ್ ಎಂದು ಹೇಳಿ ಅವರನ್ನು ಪಕ್ಕಕ್ಕೆ ಸರಿಸೋ ಮಾತಾಡೋರು. ಆದರೆ, ಭೈರಪ್ಪನವರನ್ನು ನೇರವಾಗಿ ಎದುರಿಸುತ್ತಿರಲಿಲ್ಲ. ಕನ್ನಡ ಸಾಹಿತ್ಯದ ಒಂದು ದೊಡ್ಡ ಬಳಗ ಭೈರಪ್ಪನವರನ್ನು ವಿರೋಧಿಸಿಕೊಂಡೇ ಬಂತು. ಆದರೆ ಭೈರಪ್ಪನವರನ್ನು ಸಾತ್ವಿಕವಾಗಿ ಹೆದರಿಸುವ ಸಿದ್ಧತೆ ಅವರಲ್ಲಿರಲಿಲ್ಲ. ಹಾಗಾಗಿ ಭೈರಪ್ಪನವರು ಈ ಎಲ್ಲಾ ವಾದ, ವಿವಾದಗಳ ನಡುವೆ ಅಜಯರಾಗಿಯೇ ಉಳಿದರು. ಈ ಎಲ್ಲಾ ವಾದ, ವಿವಾದಗಳ ಫಲಶೃತಿಯಿಂದಾಗಿ ಭೈರಪ್ಪನವರು ಇನ್ನೂ ಹೆಚ್ಚು ಜನಪ್ರಿಯರಾದರು. ಜತೆಗೆ ಅವರ ಓದುಗರೂ ಹೆಚ್ಚಾದರು.
ಯಾರು ಭೈರಪ್ಪನವರನ್ನು ವಿರೋಧ ಮಾಡಿದ್ದರೋ ಅವರೆಲ್ಲರೂ ಭೈರಪ್ಪನವರನ್ನು ಅಳಿಸಿ ಹಾಕಿಬಿಡುತ್ತೇವೆ ಎನ್ನುವ ಹುಮ್ಮಸ್ಸಿನಲ್ಲಿದ್ದರು. ಭೈರಪ್ಪನವರ ಜನಪ್ರಿಯತೆ ಇದೆಯಲ್ಲ ಇದು ಬರೀ ನೊರೆ, ಅದರಲ್ಲೇನೂ ಸತ್ವ ಇಲ್ಲ. ಅಂತ ಹೇಳಿಬಿಡುವ ಉಮೇದಿನಲ್ಲಿದ್ದರು. ಆದರೆ, ಈ ವಿರೋಧಗಳಿಂದಲೇ ಭೈರಪ್ಪ ಹೆಚ್ಚು ಜನಪ್ರಿಯವಾಗುತ್ತಲೇ ಹೊದರು.
ಭಾರತೀಯ ಎಲ್ಲಾ ಭಾಷೆಗಳಲ್ಲೂ ಭೈರಪ್ಪನವರು ಅತ್ಯಂತ ಜನಪ್ರಿಯ ಕನ್ನಡ ಲೇಖಕರಾದರು. ಭೈರಪ್ಪನವರು ಕಾದಂಬರಿಗಳ ರಚನೆಗೆ ಮಾಡಿಕೊಳ್ಳುತ್ತಿದ್ದ ಪೂರ್ವ ಸಿದ್ಧತೆ ಬಹಳ ಅದ್ಭುತವಾದದ್ದು. ಅವರು ಪರ್ವ ಕಾದಂಬರಿ ಬರೆದ ನಂತರ ಪರ್ವ ಬರೆದದ್ದು ಎಂಬ ಪುಸ್ತಕ ವನ್ನೂ ಬರೆದಿದ್ದಾರೆ. ಪರ್ವ ಬರೆಯುವುದಕ್ಕೂ ಮುನ್ನ ಅವರು ಎಷ್ಟು ಸಿದ್ಧತೆ ಮಾಡಿಕೊಂಡಿದ್ದರಲ್ಲ ಅದು ಯಾವುದೇ ಸಾಹಿತಿಗೆ, ಸಾಹಿತ್ಯ ವಿದ್ಯಾರ್ಥಿಗೆ ಅತ್ಯಂತ ಮಾರ್ಗದರ್ಶನ ಪುಸ್ತಕ. ಏಕೆಂದರೆ ಏನನ್ನಾದರೂ ಬರೆಯುವುದಕ್ಕೆ ಮುಂಚೆ, ಲೇಖಕ ಹೇಗೆ ಸಿದ್ಧನಾಗಬೇಕು ಎಂಬುದಕ್ಕೆ ಒಂದು ಆಕರವಾಗಿದೆ.
ಭೈರಪ್ಪನವರ ನಿಧನದೊಂದಿಗೆ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಒಂದು ಯುಂಗಾತ್ಯ ಆಗಿದೆ. ಅಸಾಧಾರಣ ಪ್ರತಿಭೆ ಮತ್ತು ಸಾಹಿತ್ಯಕವಾದ ಪೂರ್ಣ ಸಿದ್ಧತೆಯೊಂದಿಗೆ ಸಾಹಿತ್ಯ ಜಗತ್ತಿಗೆ ಹಾಜರಾದವರು ಡಾ.ಎಸ್.ಎಲ್. ಭೈರಪ್ಪ.
ಯಾವುದೇ ಸಾಹಿತಿ ಅಥವಾ ದೊಡ್ಡವರು ನಿಧನರಾದಾಗ ಶೂನ್ಯ ಕಾಣುತ್ತಿದೆ ಎಂದು ಹೇಳುವುದು ಸಾಮಾನ್ಯದ ಮಾತು. ಆದರೆ ಭೈರಪ್ಪನವರ ವಿಷಯದಲ್ಲಿ ಅತ್ಯಂತ ಗಾಢವಾಗಿ ನಮ್ಮ ಅನುಭವಕ್ಕೆ ಬರುತ್ತಿದೆ. ಇಡೀ ಭಾರತ ದೇಶದ ತುಂಬ ವ್ಯಾಪಿಸಿರುವಂತಹ ಅವರ ಕೋಟ್ಯಂತರ ಓದುಗರು ಇಂದು ಅನಾಥ ಪ್ರಜ್ಞೆಯಲ್ಲಿ ಸಂಕಟಕ್ಕೆ ಸಿಲುಕಿದ್ದಾರೆ.
ಭೈರಪ್ಪ ಅವರೊಂದಿಗೆ ಹಲವಾರು ಬಾರಿ ವಿದೇಶ ಯಾತ್ರೆ ಮಾಡಿದ್ದೆ. ಅವರು ವಿದೇಶಕ್ಕೆ ಹೋದಾಗಲೆಲ್ಲ ಹೋಟೆಲ್ಗಳಲ್ಲಿ ತಂಗುತ್ತಿರಲಿಲ್ಲ. ಬದಲಿಗೆ ತಮಗೆ ಪರಿಚಯ ಇರುವವರ ಮನೆಗಳಲ್ಲಿ ತಂಗುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಾನು ಯಾವುದೇ ದೇಶಕ್ಕೆ ಹೋದರು, ಹೋಟೆಲ್ಗಳಲ್ಲಿ ತಂಗಲ್ಲ. ಗೊತ್ತಿರುವವರ ಮನೆಗಳಲ್ಲಿ ಉಳಿಯುತ್ತೇನೆ. ಏಕೆಂದರೆ ಅವರು ಭಾರತ ಬಿಟ್ಟು ಬಂದು ಇಲ್ಲಿ ಎಷ್ಟು ಚೆನ್ನಾಗಿದ್ದಾರೆ. ಅವರ ನೋವು ನಲಿವು, ಬದುಕು ಎಲ್ಲವನ್ನು ತಿಳಿಯಬ ಹುದು ಎಂದು ಉತ್ತರಿಸಿದ್ದರು. ಅವರು ಯಾವು ದೊಂದ ನ್ನು ತೀಕ್ಷ್ಣವಾಗಿ ಗಮನವಿಟ್ಟು ನೋಡುತ್ತಿದ್ದರು ಮತ್ತು ಗ್ರಹಿಸುತ್ತಿದ್ದರು. ಎಲ್ಲವನ್ನು ಸಾಕ್ಷಿಪ್ರಜ್ಞೆಯಾಗಿ ನೋಡುತ್ತಿದ್ದರು. ಹಾಗಾಗಿಯೇ ಭೈರಪ್ಪ ಅವರಿಗೆ ನೋಡಿದ್ದನ್ನು ಗ್ರಹಿಸುವ ಮತ್ತು ನೋಡಿದ್ದನ್ನು ವಿಶ್ಲೇಶಿಸುವ ಅನನ್ಯವಾದ ಶಕ್ತಿ ಇತ್ತು.
