ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರಿಬ್ಬರಿಗೆ ಕಿರುಕುಳ ನೀಡಿದ ಆರೋಪದಡಿ A-1 ಶಿವಮೂರ್ತಿ ಮುರುಘಾ ಶರಣರ (Shivamurthy Murugha Sharana) ವಿರುದ್ಧ ದಾಖಲಾಗಿದ್ದ ಪೋಕ್ಸೊ (POCSO) ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೇಸ್ನಲ್ಲಿ ಮುರುಘಾಶ್ರೀ ನಿರ್ದೋಷಿ ಎಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಇಂದು ಮಹತ್ವದ ತೀರ್ಪು (Verdict) ಪ್ರಕಟಿಸಿತು.
ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದು ಕೋರ್ಟ್ ಇಂದು ತೀರ್ಪು ಪ್ರಕಟಿಸಿತು. ಎರಡನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಂಗಾಧರ್ ಚನ್ನಬಸಪ್ಪ ಹಡಪದ ಅವರು ತೀರ್ಪು ಪ್ರಕಟಿಸಿದರು.
ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ದಾವಣಗೆರೆಯ ವಿರಕ್ತ ಮಠದಿಂದ ಬಿಗಿ ಭದ್ರತೆಯ ನಡುವೆ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಲಯದಲ್ಲಿ ಹಾಜರಾಗಿದ್ದರು.
ರಾಜ್ಯದ ಗಮನ ಸೆಳೆದಿದ್ದ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಆರೋಪಗಳ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಮುಕ್ತಾಯಗೊಳಿಸಿ ಇಂದಿಗೆ ತೀರ್ಪು ಪ್ರಕಟಿಸುವುದಾಗಿ ನ.18ರಂದು ಹೇಳಿತ್ತು. ಪ್ರಕರಣದ ವಾದ-ಪ್ರತಿವಾದ ಆಲಿಸಿ ಕೋರ್ಟ್ ವಿಚಾರಣೆಯನ್ನು ನ.18ರಂದು ಮುಕ್ತಾಯಗೊಳಿಸಿತ್ತು.
ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಪರವಾಗಿ ಕೋರ್ಟ್ನಲ್ಲಿ ಖ್ಯಾತ ಕ್ರಿಮಿನಲ್ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ಸ್ವಾಮೀಜಿ ವಿರುದ್ಧದ ಎಲ್ಲ ಆರೋಪಗಳು ಸುಳ್ಳು ಎಂದು ವಾದಿಸಿದ್ದಾರೆ. ಪ್ರಾಸಿಕ್ಯೂಷನಲ್ ಪರ ವಕೀಲರು ಸಹ ವಾದ ಮಂಡಿಸಿದ್ದರು.
ಏನಿದು ಪ್ರಕರಣ?
ತನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲದೆ ಇತರೆ ಮಕ್ಕಳ ಮೇಲೂ ಶಿವಮೂರ್ತಿ ಶರಣರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಠದಲ್ಲಿನ ಅಡುಗೆ ಕೆಲಸದ ಮಹಿಳೆ ದೂರಿನಲ್ಲಿ ವಿವರಿಸಿದ್ದರು. ಇದರ ಆಧಾರದಡಿ ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ 2022ರ ಅಕ್ಟೋಬರ್ 13ರಂದು ಎಫ್ಐಆರ್ ದಾಖಲಿಸಲಾಗಿತ್ತು. ತದನಂತರ ಈ ದೂರನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು.
ಎಫ್ಐಆರ್ನಲ್ಲಿ ಆರೋಪಿ ಶರಣರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ಗಳಾದ 376 (ಸಿ), 376 (2) (ಎನ್), 376 (ಎಬಿ), 376 (3), 366, 366 (ಎ), 323, 114 ಮತ್ತು 34, ಪೋಕ್ಸೊ ಕಾಯಿದೆ ಸೆಕ್ಷನ್ 5 (ಎಲ್), 6,7 ಮತ್ತು 17, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಸೆಕ್ಷನ್ 3 (ಎಫ್) ಮತ್ತು 7 ಹಾಗೂ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ಸಂರಕ್ಷಣೆ) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಇಬ್ಬರು ಸಂತ್ರಸ್ತೆಯರು ಇರುವ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
