BIG NEWS: ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ — ಸರ್ಕಾರಿ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ AI ಮುಖ ಗುರುತಿನ ಹಾಜರಾತಿ ಕಡ್ಡಾಯ
ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಮುಖ ಗುರುತಿನ ಹಾಜರಾತಿ ವ್ಯವಸ್ಥೆಯನ್ನು 2026–27ನೇ ಶೈಕ್ಷಣಿಕ ಸಾಲಿನ ಆರಂಭದಿಂದಲೇ ಕಡ್ಡಾಯವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರ ನೀಡಿದ ಆದೇಶದ ಪ್ರಕಾರ, ಈಗಾಗಲೇ ಶಿಕ್ಷಕರಿಗೆ ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲು ಸೂಚನೆ ನೀಡಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೂ AI ಆಧಾರಿತ ಡಿಜಿಟಲ್ ಹಾಜರಾತಿ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಬೇಕು ಎಂದು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಸರ್ಕಾರದ 2025–26ನೇ ಸಾಲಿನ ಆಯವ್ಯಯ ಘೋಷಣೆಯ ಕಂಡಿಕೆ–112ರಲ್ಲಿ “ನಿರಂತರ” ಕಾರ್ಯಕ್ರಮದಡಿ Face Recognition ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳ ಹಾಜರಾತಿಯನ್ನು ಖಚಿತಪಡಿಸುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಘೋಷಿಸಲಾಗಿತ್ತು. ಈ ಯೋಜನೆಗಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮೂಲಸೌಕರ್ಯ ನಿರ್ಮಾಣದ ಅಡಿಯಲ್ಲಿ ಐಟಿ ವೆಚ್ಚಕ್ಕೆ 500 ಲಕ್ಷ ರೂ. ಮೀಸಲಿಡಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ–ಆಡಳಿತ) ಇಲಾಖೆಯ ಇ-ಆಡಳಿತ ಕೇಂದ್ರ (CeG) ಈಗಾಗಲೇ ಸರ್ಕಾರಿ ಸಿಬ್ಬಂದಿಗಳಿಗೆ AI ಆಧಾರಿತ ಹಾಜರಾತಿ ವ್ಯವಸ್ಥೆ ಅಭಿವೃದ್ಧಿಪಡಿಸಿರುವುದರಿಂದ, ಅದನ್ನು ವಿದ್ಯಾರ್ಥಿಗಳ ಅವಶ್ಯಕತೆಗೆ ಅನುಗುಣವಾಗಿ ಒದಗಿಸಲು ಸೂಚನೆ ನೀಡಲಾಗಿತ್ತು. ಈ ಸಂಬಂಧ ವಿದ್ಯಾರ್ಥಿಗಳ ದತ್ತಾಂಶವನ್ನು CeG ಜೊತೆ ಹಂಚಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
CeG ವತಿಯಿಂದ ಶಾಲಾ ಶಿಕ್ಷಣ ಇಲಾಖೆಗೆ AI ಆಧಾರಿತ ಮುಖ ಗುರುತಿನ ಹಾಜರಾತಿ ಮೇಲ್ವಿಚಾರಣಾ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಪ್ರಾರಂಭಿಕವಾಗಿ ಸುಮಾರು 1.99 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಂತರ ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ವಿಭಾಗ ಎರಡನ್ನೂ ಒಳಗೊಂಡಂತೆ 15 ತಿಂಗಳ ಅವಧಿಗೆ ಜಿ.ಎಸ್.ಟಿ ಸೇರಿ ಒಟ್ಟು 2,16,87,232 ರೂ. ವೆಚ್ಚದ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದನ್ನು ಸರ್ಕಾರ ಪರಿಶೀಲಿಸಿ ಅನುಮೋದಿಸಿದೆ.
ಸುವರ್ಣ ಸೌಧದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ AI ಸೆಲ್ ಹಾಗೂ CeG ಪ್ರಸ್ತಾವನೆಗಳ ಮೂಲಕ ಸರ್ಕಾರಕ್ಕೆ ಸುಮಾರು 50% ವೆಚ್ಚ ಉಳಿತಾಯ ಸಾಧ್ಯವೆಂದು ಗಮನಿಸಲಾಯಿತು. ಬಳಿಕ ತಾಂತ್ರಿಕ ಸಲಹಾ ಸಮಿತಿ (TAP) ಸಭೆಯೂ ಯೋಜನೆಗೆ ಅನುಮೋದನೆ ನೀಡಿದೆ.
AI-Based Student Facial Attendance Monitoring System ಮೊಬೈಲ್ ಅಪ್ಲಿಕೇಶನ್ ಮೂಲಕ “ನಿರಂತರ” ಕಾರ್ಯಕ್ರಮದ ಪೈಲಟ್ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, 2025ರ ಜೂನ್ 21ರಂದು ಹೊರಡಿಸಿದ್ದ ಹಿಂದಿನ ಆದೇಶವನ್ನು ಹಿಂಪಡೆಯಲಾಗಿದೆ.
ಇದೀಗ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆ ಮತ್ತು ಕಾಲೇಜುಗಳಲ್ಲಿ ಈ ವ್ಯವಸ್ಥೆಯನ್ನು 2026–27ನೇ ಶೈಕ್ಷಣಿಕ ಸಾಲಿನ ಆರಂಭದಿಂದಲೇ ಕಡ್ಡಾಯವಾಗಿ ಜಾರಿಗೊಳಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರ್ಗಿ ಮತ್ತು ಧಾರವಾಡದ ಅಪರ ಆಯುಕ್ತರು ಹಾಗೂ ಪದವಿ ಪೂರ್ವ ಶಿಕ್ಷಣ ನಿರ್ದೇಶಕರಿಗೆ ಸರ್ಕಾರ ಅನುಮತಿ ನೀಡಿ ಆದೇಶಿಸಿದೆ.
