ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಶಾಲಾ ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ತಂತ್ರಾಂಶದ ಮೂಲಕ ಹಾಜರಾತಿ ಹಾಕುವ ನಿರಂತರ ಕಾರ್ಯಕ್ರಮ 2026- 27ನೇ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಎಐ ತಂತ್ರಜ್ಞಾನ ಆಧಾರಿತ ಮುಖಚಹರೆ ಪತ್ತೆ ಹಚ್ಚುವ ಮೊಬೈಲ್ ಆಯಪ್ ಹಾಜರಾತಿಯನ್ನು 2025 -26ನೇ ಸಾಲಿನಿಂದ ಕಡ್ಡಾಯಗೊಳಿಸುವಂತೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಪರಿಷ್ಕೃತ ಆದೇಶದಂತೆ 2026- 27ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಶುಭಮಂಗಳ ತಿಳಿಸಿದ್ದಾರೆ.
ಈ ನಡುವೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಎಲ್ಲಾ ಕಾಯಂ ಸಿಬ್ಬಂದಿ, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಕ್ಯಾಮ್ಸ್ ಮೂಲಕ ಹಾಜರಾತಿ ಹಾಕಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
