ಬೆಂಗಳೂರು: ರಾಜ್ಯದ 108 ‘ಆರೋಗ್ಯ ಕವಚ’ ಆಂಬುಲೆನ್ಸ್ ಸೇವೆಯಡಿ ನೇಮಕಗೊಳ್ಳಲಿರುವ ಇಎಂಟಿ (Emergency Medical Technician) ಹಾಗೂ ಪೈಲೆಟ್ಗಳಿಗೆ (ಆಂಬುಲೆನ್ಸ್ ಚಾಲಕರು) ಮೂಲ ವೇತನದ ಜೊತೆಗೆ ಅನುಭವ ಬೋನಸ್ ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ನೀಡಲು ರಾಜ್ಯ ಸರ್ಕಾರ ಮಹತ್ವದ ಅನುಮೋದನೆ ನೀಡಿದೆ.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ನೇಮಕಗೊಳ್ಳುವ ಸಿಬ್ಬಂದಿಗೆ ಚಾಲ್ತಿಯಲ್ಲಿರುವ ಕನಿಷ್ಠ ವೇತನದ ದರದಲ್ಲಿ ಮೂಲ ವೇತನ ಪಾವತಿಸಲಾಗುವುದು. ಜೊತೆಗೆ ಹಿಂದಿನ ಸೇವಾ ಅನುಭವಕ್ಕೆ ಪ್ರತಿ ವರ್ಷಕ್ಕೆ 2%ರಂತೆ ಗರಿಷ್ಠ 15 ವರ್ಷಗಳಿಗೆ 30%ವರೆಗೆ ಅನುಭವ ಬೋನಸ್ ನೀಡಲಾಗುತ್ತದೆ. ಕಾರ್ಯಕ್ಷಮತೆ ಆಧಾರದ ಮೇಲೆ ಶೇ.10ರವರೆಗೆ ಪ್ರೋತ್ಸಾಹಧನ ನೀಡಲು ಸಹ ಅನುಮೋದನೆ ನೀಡಲಾಗಿದೆ.
ರಾಜ್ಯದ 108 ಆಂಬುಲೆನ್ಸ್ ಸೇವೆಯನ್ನು ಬಲಪಡಿಸುವ ಉದ್ದೇಶದಿಂದ, ಈ ಸೇವೆಯನ್ನು ಹಿಂದಿನ ಒಡಂಬಡಿಕೆ ಪಾಲುದಾರ ಸಂಸ್ಥೆಯಿಂದ ಹಿಂಪಡೆದು ಆರೋಗ್ಯ ಇಲಾಖೆಯ ಅಧೀನದಲ್ಲೇ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. 112 NG-ERSS ತಂತ್ರಾಂಶ ಬಳಸಿ ರಾಜ್ಯ ಮಟ್ಟದಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸ್ಥಾಪಿಸಲು ಹಾಗೂ ಜಿಲ್ಲಾಡಳಿತದ ಮೂಲಕ ಆಂಬುಲೆನ್ಸ್ಗಳನ್ನು ವಿಕೇಂದ್ರೀಕೃತವಾಗಿ ನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ.
ಈ ಯೋಜನೆಯಡಿ 108 ಆರೋಗ್ಯ ಕವಚ ಮತ್ತು 104 ಆರೋಗ್ಯ ಸಹಾಯವಾಣಿ ಸೇವೆಗಳನ್ನು ಐದು ವರ್ಷಗಳ ಅವಧಿಗೆ ಕೇಂದ್ರೀಕೃತ ವ್ಯವಸ್ಥೆಯಡಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಯೋಜನೆ ಅನುಷ್ಠಾನಕ್ಕಾಗಿ ಅಗತ್ಯ ಮಾನವ ಸಂಪನ್ಮೂಲ, ಉಪಕರಣಗಳು ಹಾಗೂ ಸೇವೆಗಳ ಖರೀದಿಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಸಂಬಂಧಿತ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ.
ಹಿಂದಿನ ಆದೇಶಗಳಂತೆ ರಾಜ್ಯದಲ್ಲಿ ಒಟ್ಟು 3,691 ಹುದ್ದೆಗಳನ್ನು (1700 EMT, 1700 ಪೈಲೆಟ್ ಸೇರಿ) ಸೃಷ್ಟಿಸಲಾಗಿದ್ದು, ಹೆಚ್ಚುವರಿ ಆಡಳಿತಾತ್ಮಕ ಹುದ್ದೆಗಳಿಗೂ ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟದ ನಿರ್ಣಯ ಹಾಗೂ ಆರ್ಥಿಕ ಇಲಾಖೆಯ ಸಹಮತಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ.
