ತುಮಕೂರು: ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಗುಂಡು ಹಾರಿಸಿ ಅಮಾನುಷವಾಗಿ ಉಗ್ರರು ಹತ್ಯೆ ಮಾಡಿರುವುದನ್ನು ಮುಖಂಡರು ಖಂಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ನಗರದ ಬಿಜಿಎಸ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪ್ರವಾಸಕ್ಕೆ ತೆರಳಿದ್ದ ಹಿಂದೂಗಳನ್ನು ಇಸ್ಲಾಮಿಕ್ ಜಿಹಾದಿ ಶಕ್ತಿಯ ಉಗ್ರರು ಅಮಾನುಷವಾಗಿ ಹತ್ಯೆ ಮಾಡಿರುವುದು ಹೇಯಕೃತ್ಯ. ಇಂತಹ ಭಯೋತ್ಪಾದನೆ ದಾಳಿಗಳಿಂದ ಈ ದೇಶದ ಸಮಗ್ರತೆ, ಏಕತೆಗೆ ಧಕ್ಕೆ ತರಬಹುದು ಎಂದು ಯಾರಾದರೂ ಭಾವಿಸಿದ್ದರೆ ಅವರು ಮೂರ್ಖರು ಎಂದರು.
ಭಯೋತ್ಪಾದನಾ ಕೃತ್ಯಗಳಿಗೆ ತಕ್ಕ ಉತ್ತರ ಕೊಡಲು ನಮ್ಮ ದೇಶ ಮತ್ತು ನಮ್ಮ ಸೈನ್ಯ ಸಮರ್ಥವಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ. ಕಾಶ್ಮೀರದಲ್ಲಿ ಚುನಾವಣೆ ಆದ ನಂತರ ಹಾಗೂ 370ನೇ ವಿಧಿ ರದ್ಧತಿಯಾದ ನಂತರ ಅಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಇದನ್ನು ನೆರೆಯ ಪಾಕಿಸ್ತಾನಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ. ದಿವಾಳಿ ಎದ್ದಿರುವ ಪಾಕಿಸ್ತಾನ ಸರ್ಕಾರ ಅಲ್ಲಿನ ಜನರ ಮನಸ್ಸನ್ನು ಬೇರೆಕಡೆ ತಿರುಗಿಸಲು ಇಂತಹ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುತ್ತಿದೆ. ಕಾಶ್ಮೀರದ ಜನರು ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಕೇಂದ್ರ ಸರ್ಕಾರದ ಜೊತೆ ನಿಲ್ಲಬೇಕು. ದೇಶದ ಪ್ರತಿ ಪ್ರಜೆಯೂ ಭಾರತ ಸರ್ಕಾರವನ್ನು ಬೆಂಬಲಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್ ಗೌಡರವರು ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿ, ದೇವರ ಹೆಸರಿನಲ್ಲಿ ಜನರನ್ನು ಕೊಲ್ಲುವುದನ್ನು ಯಾವ ಧರ್ಮವೂ ಬೆಂಬಲಿಸುವುದಿಲ್ಲ. ಯಾವ ಧರ್ಮೀಯರೂ ಬೆಂಬಲಿಸಬಾರದು. ಇದು ಪಕ್ಕದ ಪಾಕಿಸ್ತಾನ ದೇಶದಿಂದ ಪ್ರಾಯೋಜಿತವಾದ ಭಯೋತ್ಪಾದನಾ ಕೃತ್ಯವಿದು. ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ಮುಖಂಡರಾದ ಹೆಚ್.ಎಂ.ರವೀಶಯ್ಯ, ಬಿ.ಎಸ್.ನಾಗೇಶ್, ಗಣೇಶ್ ಪ್ರಸಾದ್, ಬಂಬೂಮೋಹನ್,ಮಾಧ್ಯಮ ಸಂಯೋಜಕರಾದ ಜಗದೀಶ್, ಜಿಲ್ಲಾ ವಕ್ತಾರ ಸದಾಶಿವಯ್ಯ,ಮೊದಲಾದವರು ಭಾಗವಹಿಸಿದ್ದರು.
