ಭಾನುವಾರ ಸಂಜೆ ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ನಡುವೆ ಶಸ್ತ್ರರಹಿತವಾಗಿದ್ದ ಸಾಮಾನ್ಯ ನಾಗರಿಕನೊಬ್ಬ ಉಗ್ರನ ಮೇಲೆ ಮಿಂಚಿನಂತೆ ದಾಳಿ ಮಾಡಿ ಅವನ ಕೈಯಲ್ಲಿದ್ದ ರೈಫಲ್ ಕಿತ್ತುಕೊಂಡ ಸಾಹಸದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ, ರೈಫಲ್ ಹಿಡಿದು ಜನರ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿದ್ದ ಉಗ್ರನೊಬ್ಬ ಮರವೊಂದರ ಹಿಂದೆ ಅಡಗಿ ನಿಂತಿದ್ದಾನೆ. ಆ ಸಮಯದಲ್ಲಿ ಸಮೀಪದಲ್ಲೇ ಕಾರುಗಳ ಹಿಂದೆ ಅಡಗಿದ್ದ ವ್ಯಕ್ತಿಯೊಬ್ಬರು ಹಿಂದಿನಿಂದ ಸದ್ದಿಲ್ಲದೇ ಹತ್ತಿ ಉಗ್ರನನ್ನು ಹಿಡಿದುಕೊಂಡು ರೈಫಲ್ ಕಿತ್ತುಕೊಳ್ಳುತ್ತಾರೆ. ಆಕಸ್ಮಿಕ ದಾಳಿಯಿಂದ ಉಗ್ರನು ನೆಲಕ್ಕೆ ಬಿದ್ದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ದಾಳಿಯ ವಿವರ
ಪೊಲೀಸ್ ಮೂಲಗಳ ಪ್ರಕಾರ, ಸ್ಥಳೀಯ ಕಾಲಮಾನ ಸಂಜೆ 6:30ರ ಸುಮಾರಿಗೆ ಮೂವರು ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಒಂಬತ್ತು ಮಂದಿ ಸಾರ್ವಜನಿಕರು ಸಾವನ್ನಪ್ಪಿದ್ದು, ಒಬ್ಬ ಉಗ್ರನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗಾಯಗೊಂಡ 11 ಮಂದಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ.
ಉಗ್ರರ ಉದ್ದೇಶ ಏನು?
ಉಗ್ರರು ಯಾರು, ಯಾವ ಸಂಘಟನೆಯವರು ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಬಾಂಡಿ ಬೀಚ್ನಲ್ಲಿ ಅದೇ ದಿನ ಸಂಜೆ 5 ಗಂಟೆಯಿಂದ ಯಹೂದಿಗಳ ಹನುಕ್ಕಾ ಆಚರಣೆ ನಡೆಯುತ್ತಿತ್ತು. ಮೂರು ದಿನಗಳ ಹಬ್ಬದ ಮೊದಲ ದಿನವಾಗಿದ್ದ ಕಾರಣ, ದಾಳಿ ಯಹೂದಿಗಳನ್ನು ಗುರಿಯಾಗಿಸಿಕೊಂಡಿತೇ ಎಂಬ ಅನುಮಾನಗಳು ಮೂಡಿವೆ.
ಈ ಘಟನೆಯನ್ನು ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜಾಗ್ ತೀವ್ರವಾಗಿ ಖಂಡಿಸಿದ್ದು, ಇದು ಯಹೂದಿಗಳನ್ನು ಗುರಿ ಮಾಡಿಕೊಂಡ ದಾಳಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವೈರಲ್
ಉಗ್ರನ ಮೇಲೆ ಧೈರ್ಯವಾಗಿ ಎರಗಿದ ವ್ಯಕ್ತಿಯ ಸಾಹಸದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಅಪಾಯದ ನಡುವೆಯೂ ಮಾನವೀಯ ಧೈರ್ಯ ಪ್ರದರ್ಶಿಸಿದ ಕೃತ್ಯವಾಗಿ ಜನರು ಶ್ಲಾಘಿಸುತ್ತಿದ್ದಾರೆ.

[…] ಇದನ್ನು ಓದಿ: Watch Video- ಬಾಂಡಿ ಬೀಚ್ ಗುಂಡಿನ ದಾಳಿ: ಉಗ್ರನಿಂದ … […]
[…] ಇದನ್ನು ಓದು : Watch Video- ಬಾಂಡಿ ಬೀಚ್ ಗುಂಡಿನ ದಾಳಿ: ಉಗ್ರನಿಂದ … […]