
ಸಾಹಿತ್ಯ ಲೋಕದ ನನ್ನ ಗುರುಗಳೆಂದೇ ಪರಿಗಣಿಸುವ ಡಾಕ್ಟರ್ ಹೆಚ್ ಎಸ್ ಸತ್ಯನಾರಾಯಣರವರು ನನಗೆ ಪ್ರೀತಿಯಿಂದ ನೀಡಿದ ಕೃತಿಗಳಲ್ಲಿ ನಾವು ಓದಿದ ಅವರ ಮೊದಲ ಕಾದಂಬರಿ
ಅಲಂಪು ಪ್ರಕಾಶನ ಮಾಲೂರು ರವರು ಹೊರತಂದಿರುವ, “ಕೆಲವು ತೇಜಸ್ವಿ ಪ್ರಸಂಗಗಳು”.
ಮೂಡಿಗೆರೆಯ ಮಾಂತ್ರಿಕ ಎಂದೇ ಪ್ರಸಿದ್ಧಿ ಪಡೆದಿರುವ ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ಓದುಗರನ್ನು ಮತ್ತು ಯುವಜನತೆಯನ್ನು ಸೆಳೆಯುತ್ತಿರುವ ಕವಿಗಳಲ್ಲಿ ಮೇಲ್ಪಂತಿ ಯಲ್ಲಿ ನಿಲ್ಲುವವರಲ್ಲಿ ತೇಜಸ್ವಿಯವರೂ ಒಬ್ಬರು.
ಅವರ ಬಗ್ಗೆ ನಮಗೆ ತಿಳಿಯದ ಹಲವಾರು ವಿಷಯಗಳನ್ನು ನಮ್ಮ ಮುಂದೆ ಸಣ್ಣ ಸಣ್ಣ ಕಥೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ ಲೇಖಕರು.
ಈ ಕೃತಿಯು ಓದುವಾಗ ನಮ್ಮ ಮುಖದ ಮೇಲೆ ಹಲವಾರು ಸನ್ನಿವೇಶಗಳಲ್ಲಿ ಮಂದಹಾಸವನ್ನು ಮೂಡಿಸುತ್ತದೆ, ಏಕೆಂದರೆ ತೇಜಸ್ವಿಯವರ ಮಾತೇ ಹಾಗೆ ಮುಚ್ಚುಮರೆ ಇಲ್ಲದೆ ಮಾತನಾಡುವ ವ್ಯಕ್ತಿತ್ವ ಅವರದು, ಅವರ ಆಡು ಭಾಷೆಯಿಂದ ನಮ್ಮ ಮನಗಳಲ್ಲಿ ಅಚ್ಚಳಿಯದಂತೆ ಉಳಿದುಬಿಡುತ್ತದೆ ಅವರ ವ್ಯಕ್ತಿತ್ವ.
ತೇಜಸ್ವಿಯವರು ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿರಲಿಲ್ಲ , ಪ್ರಶಸ್ತಿಗಳಿಗೆ ಎಂದೂ ಹಾತೊರೆಯುತ್ತಿರಲಿಲ್ಲ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಅವರ ಪರಿಸರದ ಮೇಲಿನ ಕಾಳಜಿ ಮತ್ತು ಪ್ರೀತಿ , ಕಾರಂತರು & ಅನಂತಮೂರ್ತಿ ಮುಂತಾದ ದಿಗ್ಗಜರೊಂದಿಗಿನ ಒಡನಾಟ, ತಂದೆ ಕುವೆಂಪು ರವರೊಂದಿಗಿನ ಬಾಂಧವ್ಯ, ಪತ್ನಿ ರಾಜೇಶ್ವರಿಯವರ ವ್ಯಕ್ತಿತ್ವ ಮತ್ತು ಅವರ ನಡುವೆಯಿದ್ದು ಪ್ರೀತಿ ಮತ್ತು ಕಾಳಜಿ , ಕುವೆಂಪುರವರು ತೀರಿಕೊಂಡಾಗ ದುಃಖದ ಸಮಯದಲ್ಲೂ ಅವರು ತೆಗೆದುಕೊಂಡ ಗಟ್ಟಿ ನಿರ್ಧಾರಗಳು, ಅತಿ ಸರಳವಾಗಿ ಆದ ಮದುವೆ , ಪ್ರೀತಿಯ ಸ್ಕೂಟರ್ , ಕಿವಿ ಎಂಬ ನಾಯಿ , ರಾಜಕೀಯ ನಿಲುವುಗಳು, ಅವರಿಗಿದ್ದ ಅಪಾರವಾದ ಕಂಪ್ಯೂಟರ್ ಜ್ಞಾನ ಮುಂತಾದವುಗಳನ್ನು ತಿಳಿಯಲು ಇಚ್ಛಿಸುವವರು ತಪ್ಪದೇ ಓದಬೇಕಾದ ಕೃತಿ ತೇಜಸ್ವಿ ಪ್ರಸಂಗಗಳು.
ತೇಜಸ್ವಿ ರವರನ್ನು ಡಾಕ್ಟರ್ ಸತ್ಯನಾರಾಯಣ ರವರು ಅತಿ ಹತ್ತಿರದಿಂದ ನೋಡಿದವರಾಗಿದ್ದಾರೆ, ಅವರೊಂದಿಗೆ ಒಡನಾಟವನ್ನು ಇಟ್ಟುಕೊಂಡವರಾಗಿದ್ದರಿಂದ ಈ ಕೃತಿಯು ನೈಜತೆಯಿಂದ ಮೂಡಿ ಬಂದಿದೆ.
ನನಗೆ ಈ ಕೃತಿಯನ್ನು ಓದಿದ ನಂತರ ಅನಿಸಿದ್ದು ಅವರ ಮನೆ “ನಿರುತ್ತರ”ಕ್ಕೆ ಹೋಗಬೇಕು, ಅಲ್ಲಿ ಸುತ್ತಾಡಿ ಬರಬೇಕು , ಅಲ್ಲಿ ಸ್ವಲ್ಪ ಹೊತ್ತು ಕಾಲ ಕಳೆಯಬೇಕು ಎಂದು..!!
— ಅಪರಿಚಿತ ಮೌನಿ