ಬೆಂಗಳೂರು: ಮುಂಬರುವ ಜಿಬಿಎ ಚುನಾವಣೆಯಲ್ಲಿ ಈ ಬಾರಿ ಇವಿಎಂ ಯಂತ್ರ ಬಳಕೆಯನ್ನು ಕೈಬಿಟ್ಟು ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಸಲು ನಿರ್ಧರಿಸಲಾಗಿದೆ. ಕಳೆದ ಬಾರಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಇವಿಎಂ ಬಳಕೆಯಾಗಿದ್ದರೂ, ಈ ಬಾರಿ ಸಂಪೂರ್ಣವಾಗಿ ಬ್ಯಾಲೆಟ್ ಪೇಪರ್ ವಿಧಾನ ಅಳವಡಿಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಮೇ 25ರ ನಂತರ ಜಿಬಿಎ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇವಿಎಂ ಬಳಕೆಗೆ ಕೊಕ್ ನೀಡಿ ಬ್ಯಾಲೆಟ್ ಪೇಪರ್ ವಿಧಾನಕ್ಕೆ ಮರಳಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ನಾವು ಸ್ವತಂತ್ರ ಸಂಸ್ಥೆಯಾಗಿದ್ದು, ಬ್ಯಾಲೆಟ್ ಪೇಪರ್ ಬಳಕೆಯ ನಿರ್ಧಾರ ನಮ್ಮದೇ ಸ್ವಂತ ತೀರ್ಮಾನ ಎಂದು ತಿಳಿಸಿದೆ. ಇವಿಎಂ ಮತ್ತು ಬ್ಯಾಲೆಟ್ ಪೇಪರ್ ಎರಡೂ ವಿಧಾನಗಳಲ್ಲಿ ಯಾವುದೇ ದೋಷವಿಲ್ಲ. ಸುಪ್ರೀಂ ಕೋರ್ಟ್ ಕೂಡ ಬ್ಯಾಲೆಟ್ ಪೇಪರ್ ಬಳಕೆಯನ್ನು ನಿರ್ಬಂಧಿಸಿಲ್ಲ. ಹೀಗಿರುವಾಗ ಬ್ಯಾಲೆಟ್ ಪೇಪರ್ ಬಳಕೆ ಮಾಡಬಾರದು ಎಂಬ ಪ್ರಶ್ನೆಯೇ ಇಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಚುನಾವಣೆ ವಿಧಾನ ಬದಲಾವಣೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಹಾಗೂ ಮತದಾರರ ಗಮನ ಈ ನಿರ್ಧಾರದತ್ತ ಸೆಳೆಯುತ್ತಿದೆ.
