ಹಾಸನ, ಜೂನ್ 15: ಸಕಲೇಶಪುರ ತಾಲೂಕಿನ ಗುಡ್ಡೆಬೆಟ್ಟ ಗ್ರಾಮದ ಸಮೀಪದ ಎಬಿಸಿ ಎಸ್ಟೇಟ್ನಲ್ಲೊಂದು ಭಾರೀ ದುರ್ಘಟನೆ ನಡೆದಿದೆ. ಶನಿವಾರ ರಾತ್ರಿ ಕಾಫಿ ತೋಟದೊಳಗೆ ಆಹಾರದ ಹುಡುಕಾಟದಲ್ಲಿ ತೊಡಗಿದ್ದ ತಾಯಿ ಆನೆ ಮತ್ತು ಮರಿಯಾನೆ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಘಾತ ಮೂಡಿಸಿದೆ.
ತೀವ್ರ ಗಾಳಿ-ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಮಣ್ಣುಪಾಲಾಗಿತ್ತು. ಅದನ್ನು ಗಮನಿಸದೆ ಹಾದುಹೋಗುತ್ತಿದ್ದ ಆನೆಗಳು ಆ ತಂತಿಯನ್ನು ತುಳಿದ ಪರಿಣಾಮ ತಕ್ಷಣವೇ ಶಾಕ್ಗೆ ಒಳಗಾಗಿ ಪ್ರಾಣ ಕಳೆದುಕೊಂಡಿವೆ ಎನ್ನಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲೇ ಶವಪರೀಕ್ಷೆ ನಡೆಸಿ ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.
ಪ್ರಾಣಿಗಳ ಸಂರಕ್ಷಣೆ ಮತ್ತು ಕಾಡುಪ್ರದೇಶದ ವಿದ್ಯುತ್ ವ್ಯವಸ್ಥೆಯ ನಿರ್ವಹಣೆ ಕುರಿತಾಗಿ ಮತ್ತೆ ಪ್ರಶ್ನೆಗಳು ಎದ್ದಿರುವ ಈ ಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.





