ಮೈಸೂರು : ಚಲಿಸುತ್ತಿದ್ದ ಸಾರಿಗೆ ಬಸ್ ಚಾಲಕನಿಗೆ ಹಠಾತ್ ಎದೆ ನೋವು ಕಾಣಿಸಿಕೊಂಡಿದ್ದು, ನಿಯಂತ್ರಣ ಕಳೆದುಕೊಂಡ ಬಸ್ ಪಾದಚಾರಿ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಸ್ಟೇರಿಂಗ್ ಮೇಲೆ ಅಸುನೀಗಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಗ್ರಾಮದ ಬಳಿ ಇಂದು ನಡೆದಿದೆ.
ಪಾದಚಾರಿ ಮಹಿಳೆ ಲಕ್ಷ್ಮಮ್ಮ ಹಾಗೂ ಬಸ್ ಚಾಲಕ ಸುನೀಲ್ ಕುಮಾರ್ ಮೃತ ದುರ್ದೈವಿಗಳು. ಬಸ್ ಚಾಲಕ ಸ್ಟೇರಿಂಗ್ ಮೇಲೆ ಬಿದ್ದಿದ್ದನ್ನು ಕಂಡ ಪ್ರಯಾಣಿಕರು, ಎಬ್ಬಿಸುಲು ಬಂದಾಗ ಆತನಿಗೆ ಹಠಾತ್ ಹೃದಯಾಘಾತ ಸಂಭವಿಸಿರುವುದು ಗಮನಕ್ಕೆ ಬಂದಿದೆ.
ಸುನೀಲ್ ಕುಮಾರ್ ಕೇರಳದ ಮಾನಂದವಾಡಿಯಿಂದ ಹೆಚ್.ಡಿ.ಕೋಟೆಗೆ ಬಸ್ ಅನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ತಾಲೂಕಿನ ದಮ್ಮನಕಟ್ಟೆ ಬಳಿ ಎದೆ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಪಕ್ಕ ತೆರಳುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಗದ್ದೆಯಲ್ಲಿ ನಿಂತಿದೆ. ತೀವ್ರ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಚಾಲಕ ಸ್ಟೇರಿಂಗ್ ಮೇಲೆ ಬಿದ್ದಿದ್ದನ್ನು ಗಮನಿಸಿದ ಪ್ರಯಾಣಿಕರು ಎಬ್ಬಿಸಲು ಬಂದಾಗ ಆತನೂ ಮೃತಪಟ್ಟಿರುವುದು ಗೊತ್ತಾಗಿದೆ.
![]()
ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಂತರಸಂತೆ ಪೊಲೀಸರು, ಇಬ್ಬರ ಮೃತದೇಹಗಳನ್ನು ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಸ್ಥಳಕ್ಕೆ ಕೋಟೆ ಬಸ್ ಡಿಪೋದ ಅಧಿಕಾರಿಗಳು ಆಗಮಿಸಿ, ಪ್ರಯಾಣಿಕರಿಗೆ ಬದಲಿ ಬಸ್ ವ್ಯವಸ್ಥೆ ಮಾಡಿಕೊಟ್ಟು, ಅವರ ಮುಂದಿನ ಪಯಣಕ್ಕೆ ಅವಕಾಶ ಕಲ್ಪಿಸಿದರು.
ಮೃತ ಚಾಲಕ ಸುನೀಲ್ ಕುಮಾರ್ ಮೈಸೂರು ಮೂಲದವರಾಗಿದ್ದು, ಕಳೆದ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
