ಬೆಂಗಳೂರು, ಡಿ.20: ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಶಿಸ್ತು, ಸಮಯಪಾಲನೆ ಹಾಗೂ ವೃತ್ತಿಪರ ಘನತೆ ಕಾಪಾಡುವ ಉದ್ದೇಶದಿಂದ ಸರ್ಕಾರ ಮತ್ತೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಸರ್ಕಾರಿ ನೌಕರರು ಕಚೇರಿ ಸಮಯದಲ್ಲಿ ಅನಗತ್ಯವಾಗಿ ಓಡಾಡುವುದಕ್ಕೆ ಕಡಿವಾಣ ಹಾಕಲು ಮತ್ತು ಸಭ್ಯ ಉಡುಗೆ ತೊಡುಗೆ ಧರಿಸುವುದನ್ನು ಕಡ್ಡಾಯಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಡಿಸೆಂಬರ್ 18ರಂದು ಹೊಸ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ ನೌಕರರ ವರ್ತನೆ, ವಸ್ತ್ರಸಂಹಿತೆ ಪಾಲನೆ ಹಾಗೂ ವಿವಿಧ ವಹಿಗಳ (ರಿಜಿಸ್ಟರ್) ನಿರ್ವಹಣೆಯ ಕುರಿತು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ನೀಡಿದ್ದ ಸೂಚನೆಗಳನ್ನು ಅನೇಕರು ಪಾಲಿಸದ ಹಿನ್ನೆಲೆ, ಈ ಬಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.
ಬೆಳಗ್ಗೆ 10.10ಕ್ಕೆ ಕಡ್ಡಾಯ ಹಾಜರಾತಿ
ಸರ್ಕಾರಿ ಕಚೇರಿಗಳ ನಿಗದಿತ ಸಮಯ ಬೆಳಗ್ಗೆ 10.10 ಗಂಟೆಯಾಗಿದ್ದು, ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ವೇಳೆಗೆ ಕಚೇರಿಗೆ ಹಾಜರಾಗಬೇಕು. ಕಚೇರಿ ಸಮಯ ಮುಗಿಯುವವರೆಗೂ ಕರ್ತವ್ಯದ ಸ್ಥಳದಲ್ಲಿಯೇ ಇರಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಚಲನವಲನ ವಹಿ ನಿರ್ವಹಣೆ ಕಡ್ಡಾಯ
ಕಚೇರಿ ವೇಳೆಯಲ್ಲಿ ನೌಕರರು ಸೀಟಿನಿಂದ ನಾಪತ್ತೆಯಾಗುವ ಪ್ರವೃತ್ತಿಗೆ ಬ್ರೇಕ್ ಹಾಕಲು ‘ಚಲನವಲನ ವಹಿ’ಯನ್ನು ಕಡ್ಡಾಯವಾಗಿ ನಿರ್ವಹಿಸಲು ಸೂಚಿಸಲಾಗಿದೆ.
ಅಧಿಕೃತ ಕೆಲಸಕ್ಕಾಗಿ ಹೊರಗೆ ಹೋಗಬೇಕಾದರೆ ಕಾರಣ ಹಾಗೂ ಉದ್ದೇಶವನ್ನು ವಹಿಯಲ್ಲಿ ದಾಖಲಿಸಬೇಕು. ಮೇಲಾಧಿಕಾರಿಗಳ ಪೂರ್ವಾನುಮತಿ ಅಗತ್ಯವಾಗಿದ್ದು, ಹೊರಗೆ ಹೋದ ಸಮಯ ಹಾಗೂ ಹಿಂದಿರುಗಿದ ಸಮಯವನ್ನು ಸಹಿಯೊಂದಿಗೆ ನಮೂದಿಸಬೇಕು. ವಹಿಯಲ್ಲಿ ದಾಖಲಿಸದೆ ಕಚೇರಿಯಲ್ಲಿ ಇಲ್ಲದಿದ್ದರೆ, ಅದನ್ನು ಅನಧಿಕೃತ ಗೈರುಹಾಜರಿಯಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತದೆ.
ನಗದು ಘೋಷಣೆ ಮರೆಯುವಂತಿಲ್ಲ
ಕಚೇರಿಗೆ ಬಂದು ಹಾಜರಾತಿ ವಹಿಗೆ ಅಥವಾ ಬಯೋಮೆಟ್ರಿಕ್ಗೆ ಸಹಿ ಹಾಕಿದ ತಕ್ಷಣ, ತಮ್ಮ ಬಳಿ ಇರುವ ನಗದು ಮೊತ್ತವನ್ನು ‘ನಗದು ಘೋಷಣೆ ವಹಿ’ಯಲ್ಲಿ ದಾಖಲಿಸಿ ಸಹಿ ಮಾಡುವುದು ಕಡ್ಡಾಯ. ಈ ನಿಯಮವನ್ನು ಸಿಬ್ಬಂದಿ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಮೇಲಾಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕೆಂದು ಸೂಚಿಸಲಾಗಿದೆ.
ಸಭ್ಯ ಉಡುಗೆ-ತೊಡುಗೆ ಕಡ್ಡಾಯ
ಸರ್ಕಾರಿ ಕಚೇರಿಯ ಘನತೆಗೆ ಧಕ್ಕೆ ಬಾರದಂತೆ ಸಭ್ಯ ಹಾಗೂ ಮಾನ್ಯತೆ ಪಡೆದ ವಸ್ತ್ರಸಂಹಿತೆ ಪಾಲಿಸುವಂತೆ ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದೆ. ಜೀನ್ಸ್, ಟೀ-ಶರ್ಟ್ನಂತಹ ಕ್ಯಾಶುವಲ್ ಉಡುಪುಗಳನ್ನು ಧರಿಸದಂತೆ ಎಚ್ಚರಿಕೆ ನೀಡಲಾಗಿದೆ.
ಈ ಎಲ್ಲ ನಿಯಮಗಳನ್ನು ರಾಜ್ಯದ ಎಲ್ಲಾ ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಬಿ. ಅವರು ಆದೇಶಿಸಿದ್ದಾರೆ.

[…] […]