ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಹಿಸುದ್ದಿ ಸಿಕ್ಕಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಪದವಿ ಮತ್ತು TET ಪ್ರಮಾಣಪತ್ರ ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಚಿತ ಪರಿಣಾಮವಿಲ್ಲದಂತೆ ಒಂದು ಬಾರಿಯ ವೇತನ ಬಡ್ತಿ ನೀಡಲು ಒಪ್ಪಿಗೆ ನೀಡಲಾಗಿದೆ. ಜೊತೆಗೆ 6 ಮತ್ತು 7ನೇ ತರಗತಿಗಳಿಗೆ ಬೋಧಿಸಲು ಅನುಮತಿ ಹಾಗೂ ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ.
ಸಭೆಯ ಪ್ರಮುಖ ನಿರ್ಣಯಗಳು:
- ರೈತರು ಮತ್ತು ಕನ್ನಡಪರ ಹೋರಾಟಗಾರರ ವಿರುದ್ಧದ 60 ಪ್ರಕರಣಗಳನ್ನು ವಾಪಸ್ ಪಡೆಯಲು ನಿರ್ಧಾರ.
- ಮೆಟ್ರೋ ಹಂತ-3 ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಅನುಮೋದನೆ. ಜೆಪಿನಗರ 4ನೇ ಹಂತದಿಂದ ಹೆಬ್ಬಾಳದವರೆಗೆ 37.121 ಕಿ.ಮೀ ಉದ್ದದ ಯೋಜನೆಗೆ ಒಪ್ಪಿಗೆ.
- ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕವನ್ನು 41 ಪೈಸೆಯಿಂದ 42 ಪೈಸೆಗೆ ಹೆಚ್ಚಳ.
- ಆಶಾಕಿರಣ ಯೋಜನೆಗೆ 52.85 ಕೋಟಿ ರೂ. ಅನುದಾನ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಅಂಧತ್ವ ನಿವಾರಣಾ ಕಾರ್ಯಕ್ರಮ.
- ಬೆಂಗಳೂರಿನ ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ರಾಯಸಂದ್ರ ಗ್ರಾಮದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ. ಕರ್ನಾಟಕ ಗೃಹ ಮಂಡಳಿಯಿಂದ 65 ಕೋಟಿ ರೂ. ವೆಚ್ಚದಲ್ಲಿ 25 ಎಕರೆ ಜಮೀನು ಖರೀದಿ.
