ಹಾಸನ – ಅಧ್ಯಯನ ಮತ್ತು ಅಧ್ಯಾಪನವೆಂಬೆರಡು ಅಂಶಗಳು ವಿದ್ಯಾರ್ಥಿಗಳಲ್ಲಿ ತಪಸ್ಸಿನ ರೂಪದಲ್ಲಿ ಇರಬೇಕು ಎಂದು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡಶ್ರೀ ಬಾ ನಂ ಲೋಕೇಶ ಹೇಳಿದರು.
ಆಚಾರ್ಯ ಕಾಮರ್ಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕ್ಯಾಲೆಂಡರ್ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರೀಕ್ಷೆಯೊಂದು ಹಬ್ಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ವಿದ್ಯಾರ್ಥಿಗಳು ಮುಂದಿರುವ ಪರೀಕ್ಷೆಗೆ ಹೇಗೆ ಸಜ್ಜಾಗಬೇಕು ಎಂದು ಹೇಳುತ್ತಾ ಪಠ್ಯ ಪುಸ್ತಕ ಮಾತೃ ರೂಪದಲ್ಲಿ ಇರುತ್ತದೆ. ಪಠ್ಯ ಪುಸ್ತಕವನ್ನು ಚೆನ್ನಾಗಿ ಮೊದಲ ಪಾಠದ ಮೊದಲ ಅಕ್ಷರದಿಂದ ಕೊನೆಯ ಪಾಠದ ಕೊನೆಯ ಅಕ್ಷರದವರೆಗೆ ನಾಲ್ಕೈದು ಬಾರಿ ಓದಿದ್ದೆ ಆದರೆ ವಿಷಯ ಜ್ಞಾನ ಪಡೆದುಕೊಳ್ಳುತ್ತೀರಿ. ಪರೀಕ್ಷೆಯಲ್ಲಿ ಪಠ್ಯ ಪುಸ್ತಕ ಆಧಾರಿತವಾಗಿ ಪ್ರಶ್ನೆಗಳನ್ನು ಕೊಟ್ಟಿರುತ್ತಾರೆ. ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುತ್ತದೆ.
ಪರೀಕ್ಷಾ ಸಮಯದಲ್ಲಿ ಸ್ನೇಹಿತರ ಜೊತೆಗೆ ಸುತ್ತಾಟ, ಹೊರಗಡೆ ತಿನ್ನುವುದು, ಮೊಬೈಲ್ ಬಳಸುವುದನ್ನು ವರ್ಜಿಸಬೇಕು. ಪುಸ್ತಕದ ಹುಳುಗಳಾಗಬೇಕು ಆಗ ಮಾತ್ರ ನಿಮ್ಮ ಯಶಸ್ಸು ನಿಮ್ಮ ಬೆನ್ನಿಂದೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾoಶುಪಾಲ ಡಾ. ಆದರ್ಶ ಅಧ್ಯಕ್ಷತಾ ನುಡಿಯಾಡುತ್ತಾ ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷ ನೂರಕ್ಕೆ ನೂರರಷ್ಟು ಫಲಿತಾಂಶ ಬರುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ತರಬೇತಿಗೊಳಿಸುತ್ತಿದ್ದೇವೆ. ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭವಾಗಿದೆ. ಇಂತಹ ಒಳ್ಳೆಯ ಕಾಲೇಜಿಗೆ ದಾಖಲಾಗಿ ಮಾದರಿಯುತ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದರು.

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ನೈತಿಕ ಶಿಕ್ಷಣ ವಿಷಯವಾಗಿ ಉಪನ್ಯಾಸ ನೀಡಿದ ಬಸವಾಘಟ್ಟ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ್ಯೊಪಾಧ್ಯಾಯಿನಿ ಪುಷ್ಪ ಪಿ ಹೆಚ್ ಮಾತನ್ನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ನಿಮ್ಮ ಜೀವನವನ್ನು ಯಾವ ರೀತಿ ತೊಡಗಿಸಿಕೊಳ್ಳುವಿರೋ ಆ ರೀತಿಯಲ್ಲಿ ನಿಮ್ಮ ಭವಿಷ್ಯ ನಿರ್ಮಾಣವಾಗುತ್ತದೆ. ಸತ್ಪ್ರಜೆಗಳಾಗಿ ಸಮಾಜದ ಆಸ್ತಿಯಾಗುವ ನಿಟ್ಟಿನಲ್ಲಿ ನಿಮ್ಮ ಆಲೋಚನೆ ಇರಬೇಕು ಎಂದರು.

ಸಿರಿ ಕನ್ನಡ ವಾರ್ತಾ ಪತ್ರಿಕೆಯ ಪ್ರಧಾನ ಸಂಪಾದಕರಾದ ಆನಂದ್ ಪಟೇಲ್ ನೇರಲಿಗೆ ಆಚಾರ್ಯ ಕಾಲೇಜಿನ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಚಲನಚಿತ್ರ ನಾಯಕ ನಟ ಯು. ಬಿ. ಮನು ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಾಸನ ತಾಲ್ಲೂಕು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ, ಡೆಕ್ಕನ್ ವ್ಯಾಲಿ ಇಂಟರ್ನೆಷನಲ್ ಸ್ಕೂಲ್ ನ ಕಾರ್ಯದರ್ಶಿ ಸುನಿಲ್, ಉಪಪ್ರಾoಶುಪಾಲ ಕುಮಾರ್, ಚುಟುಕು ಸಾಹಿತ್ಯ ಪರಿಷತ್ ದುದ್ದ ಹೋಬಳಿ ಅಧ್ಯಕ್ಷೆ ಪೂರ್ಣಿಮಾ ನಾಗೇಂದ್ರ, ಶಿಕ್ಷಕಿ ಆಶಾ, ಆನಂದ್ ಪಟೇಲ್, ಡಾ ಆದರ್ಶ, ಮನು ಯು ಬಿ ಕಾರ್ಯಕ್ರಮದಲ್ಲಿ ಮಾತನ್ನಾಡಿದರು.
