ಪ್ರಿತಿ, ನಂಬಿಕೆ ಮತ್ತು ಸಂಬಂಧ ಬಲಪಡಿಸುವ ಉದ್ದೇಶದಿಂದ ಜನರು ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ. ಕೆಲವರು ನಗದು, ಚಿನ್ನ, ಬೆಳ್ಳಿ, ವಾಹನ ಅಥವಾ ಗೃಹೋಪಯೋಗಿ ವಸ್ತುಗಳನ್ನು ನೀಡಿದರೆ, ಇನ್ನು ಕೆಲವರು ಮನೆ, ಜಮೀನು ಮುಂತಾದ ಆಸ್ತಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ.
ಆದರೆ ಕೆಲ ಸಂದರ್ಭಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾದಾಗ, ಕೊಟ್ಟ ಉಡುಗೊರೆಯನ್ನು ಮರಳಿ ಕೇಳುವ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ, ಒಮ್ಮೆ ನೀಡಿದ ಆಸ್ತಿಯನ್ನು ಮರಳಿ ಪಡೆಯಲು ಹಕ್ಕು ಇದೆಯೇ? ಕಾನೂನು ಏನು ಹೇಳುತ್ತದೆ?
ಉಡುಗೊರೆಯನ್ನು ಹಿಂದಕ್ಕೆ ಪಡೆಯಲು ಸಾಧ್ಯವೇ?
ಸಾಮಾನ್ಯವಾಗಿ, ಒಮ್ಮೆ ನೀಡಿದ ಉಡುಗೊರೆಯನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಉಡುಗೊರೆ ಶಾಶ್ವತವಾಗಿ ನೀಡುವ ಉದ್ದೇಶದಿಂದ ಕೊಟ್ಟಿದ್ದರೆ, ಸಂಬಂಧ ಕೊನೆಗೊಂಡರೂ ಸಹ, ಅದನ್ನು ಕಾನೂನುಬದ್ಧವಾಗಿ ವಾಪಸ್ ಪಡೆಯಲು ಸಾಧ್ಯವಿಲ್ಲ. ಆದರೆ ನಿಶ್ಚಿತಾರ್ಥದ ಉಂಗುರ ಅಥವಾ ಕುಟುಂಬದ ಕೆಲವು ಚರಾಸ್ತಿಗಳಿಗೆ ಮಾತ್ರ ಕೆಲವು ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ ಇದೆ.
ಆಸ್ತಿ ವರ್ಗಾವಣೆ ಕಾಯ್ದೆಯ ಪ್ರಕಾರ ವಿನಾಯಿತಿಗಳು
ಭಾರತೀಯ ಆಸ್ತಿ ವರ್ಗಾವಣೆ ಕಾಯ್ದೆ (Transfer of Property Act) ಸೆಕ್ಷನ್ 126 ಪ್ರಕಾರ, ಕೆಲವು ಸಂದರ್ಭಗಳಲ್ಲಿ ಉಡುಗೊರೆ ಪತ್ರವನ್ನು (Gift Deed) ರದ್ದುಗೊಳಿಸಲು ಅಥವಾ ಅಮಾನತುಗೊಳಿಸಲು ಅವಕಾಶವಿದೆ:
ಪರಸ್ಪರ ಒಪ್ಪಿಗೆ: ಉಡುಗೊರೆ ನೀಡುವವರು ಮತ್ತು ಸ್ವೀಕರಿಸುವವರು ಇಬ್ಬರೂ ಒಪ್ಪಿಕೊಂಡರೆ, ಗಿಫ್ಟ್ ಡೀಡ್ ರದ್ದುಗೊಳಿಸಬಹುದು.
ಆಸ್ತಿ ವರ್ಗಾಯಿಸದಿದ್ದರೆ: ಗಿಫ್ಟ್ ಪತ್ರಕ್ಕೆ ಸಹಿ ಹಾಕಿದರೂ ಆಸ್ತಿಯನ್ನು ವರ್ಗಾಯಿಸದಿದ್ದರೆ, ಕೊಡುವವರು ತಮ್ಮ ನಿರ್ಧಾರವನ್ನು ಬದಲಾಯಿಸಬಹುದು.
ವಂಚನೆ ಅಥವಾ ಬಲವಂತ: ಉಡುಗೊರೆಯನ್ನು ವಂಚನೆ, ಬಲವಂತ ಅಥವಾ ಸುಳ್ಳು ಭರವಸೆಯ ಮೂಲಕ ಪಡೆದಿದ್ದರೆ, ಅದನ್ನು ಕಾನೂನುಬದ್ಧವಾಗಿ ವಾಪಸ್ ಪಡೆಯಬಹುದು.
ವಂಚನೆ ನಡೆದರೆ ಏನಾಗುತ್ತದೆ?
ವಂಚನೆ ಅಥವಾ ಸುಳ್ಳು ಹೇಳಿಕೆ ಮೂಲಕ ಉಡುಗೊರೆ ಪಡೆದರೆ, ಅಂತಹ ಉಡುಗೊರೆ ಅಮಾನ್ಯವಾಗುತ್ತದೆ. ಈ ರೀತಿಯ ಕೃತ್ಯಗಳು *ಭಾರತೀಯ ದಂಡ ಸಂಹಿತೆ (IPC)*ಯ ಸೆಕ್ಷನ್ 316 ಮತ್ತು 318 ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಕಾನೂನು ಸಲಹೆ ಅಗತ್ಯವಾದಾಗ
ಉಡುಗೊರೆಯನ್ನು ಮರಳಿ ಪಡೆಯುವ ಬಗ್ಗೆ ಸಂಶಯಗಳಿದ್ದರೆ, ವಕೀಲರ ಸಲಹೆ ಪಡೆಯುವುದು ಉತ್ತಮ. ಅವರು ಸ್ಥಳೀಯ ಕಾನೂನುಗಳ ಆಧಾರದ ಮೇಲೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಉಡುಗೊರೆಯ ಬಿಲ್ಗಳು ಅಥವಾ ದಾಖಲೆಗಳನ್ನು ಸಂಗ್ರಹಿಸಿಕೊಳ್ಳುವುದು ಮಹತ್ವದ ವಿಚಾರ.
ಉಡುಗೊರೆ ನೀಡುವ ಮುನ್ನ ಗಮನಿಸಬೇಕಾದ ಅಂಶಗಳು
ಉಡುಗೊರೆ ಎಂದರೆ, ಯಾವುದೇ ಹಣಪರ ಮೌಲ್ಯ ಪಡೆಯದೇ, ಸ್ವಯಂಪ್ರೇರಿತವಾಗಿ ಆಸ್ತಿಯನ್ನು ಇನ್ನೊಬ್ಬರಿಗೆ ವರ್ಗಾಯಿಸುವುದು.
ಗಿಫ್ಟ್ ಡೀಡ್ ಸಿದ್ಧಪಡಿಸಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ.
ಉಡುಗೊರೆಯ ಷರತ್ತುಗಳು ಪಾಲಿಸಲ್ಪಡದಿದ್ದರೆ, ಆ ಉಡುಗೊರೆಯನ್ನು ರದ್ದುಗೊಳಿಸಬಹುದು. ಉದಾಹರಣೆಗೆ, ತಂದೆ ಮಗನಿಗೆ “ಜೀವನಪರ್ಯಂತ ನೋಡಿಕೊಳ್ಳುವ” ಷರತ್ತಿನೊಂದಿಗೆ ಆಸ್ತಿ ನೀಡಿದರೆ ಮತ್ತು ಮಗ ಅದು ಪಾಲಿಸದಿದ್ದರೆ, ತಂದೆ ಆಸ್ತಿಯನ್ನು ಮರಳಿ ಪಡೆಯಬಹುದು.
ಯಾವ ಆಸ್ತಿಯನ್ನು ಉಡುಗೊರೆಯಾಗಿ ನೀಡಬಹುದು?
ನೀವು ಮಾಲೀಕತ್ವ ಹೊಂದಿರುವ ಸ್ವಂತ (Self-acquired) ಆಸ್ತಿಯನ್ನು ಮಾತ್ರ ಉಡುಗೊರೆಯಾಗಿ ನೀಡಬಹುದು.
ಪಿತ್ರಾರ್ಜಿತ (Ancestral) ಆಸ್ತಿಯನ್ನು ಉಡುಗೊರೆಯಾಗಿ ನೀಡಲು ಕಾನೂನು ಅನುಮತಿಸುವುದಿಲ್ಲ.
ಸಹಮಾಲೀಕತ್ವ (Joint ownership) ಇದ್ದರೆ, ನಿಮ್ಮ ಪಾಲಿನಷ್ಟನ್ನು ಮಾತ್ರ ಉಡುಗೊರೆಯಾಗಿ ನೀಡಬಹುದು.
