ಕೆ.ಆರ್.ಪೇಟೆ: ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ತಿಗಳಗೌಡ ಸಮುದಾಯದ ಮೂಲ ಪುರುಷ ಅಗ್ನಿಬನ್ನಿರಾಯಸ್ವಾಮಿ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹೊಸಹೊಳಲು ಗ್ರಾಮದಲ್ಲಿ ಇರುವ ತಿಗಕಲಗೌಡ ಸಮುದಾಯದ ಶ್ರೀ ರಾಮಮಂದಿರ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಹೆಚ್.ಎಸ್.ರಾಜು ಅವರು ಅಗ್ನಿಬನ್ನಿರಾಯಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ತಿಗಳ ಸಮುದಾಯದವರು ನಮ್ಮಲ್ಲಿನ ಕೀಳರಿಮೆಯನ್ನು ದೂರ ಮಾಡಬೇಕು. ಸಂಘಟಿತರಾಗಿ ಸರ್ಕಾರದ ವತಿಯಿಂದ ನಮ್ಮ ಸಮುದಾಯಕ್ಕೆ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಯ ದಿಕ್ಕಿನತ್ತ ಸಾಗಬೇಕಾಗಿದೆ. ನಮ್ಮ ತಿಗಳ ಜನಾಂಗದವರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇನ್ನೂ ಹೆಚ್ಚಿನ ಒತ್ತು ನೀಡಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಉತ್ತಮ ಹುದ್ದೆ ಪಡೆದುಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ರಾಜು ಮನವಿ ಮಾಡಿದರು.
ನಮ್ಮ ಸಮುದಾಯದ ಬಂಧುಗಳು ನಮ್ಮ ಜನಾಂಗದ ಸಂಘಟನೆಯ ಜೊತೆಗೆ ಇತರೆ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಮುಂದಾಗಬೇಕು. ನಮ್ಮ ಸಮುದಾಯವು ಪ್ರಮುಖವಾಗಿ ಕೃಷಿ ತೋಟಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಸಮುದಾಯವಾಗಿದೆ. ಪ್ರಮುಖವಾಗಿ ಹೂವಿನ ವ್ಯಾಪಾರ ಮಾಡಿ ಜೀವನ ನಡೆಸುವ ಹಿಂದುಳಿದ ಪ್ರವರ್ಗ ಎ ಗುಂಪಿಗೆ ಸೇರಿರುವ ಸಮುದಾಯದ ಬಂಧುಗಳು ಪರಿಶ್ರಮದ ದುಡಿಮೆ ಮಾಡುತ್ತಾ ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ನಮ್ಮ ಸಮುದಾಯದಲ್ಲಿ ಪ್ರತಿನಿತ್ಯ ಕೂಲಿ ಮಾಡಿ ಜೀವನ ನಡೆಸುವವರು ಹೆಚ್ಚು ಇದ್ದಾರೆ. ಹಾಗಾಗಿ ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರಾದ ಹೆಚ್.ಟಿ.ಮಂಜು ಅವರು ನಮ್ಮ ಸಮುದಾಯಕ್ಕೆ ಸಮುದಾಯ ಭವನ ಹಾಗೂ ಧರ್ಮರಾಯ ಭವನ ನಿರ್ಮಿಸಲು ಸೂಕ್ತ ನಿವೇಶನ ಕೊಡಿಸಬೇಕು ಈ ಮೂಲಕ ನಮ್ಮ ತಿಗಳ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೆಚ್.ಎಸ್.ರಾಜು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಸಮುದಾಯದ ಯಜಮಾನರುಗಳಾದ ಎಂ.ಲಕ್ಷ್ಮೇ ಗೌಡ, ಬಸವೇಗೌಡ, ಪಾಪೇಗೌಡ, ಪುರಸಭಾ ಮಾಜಿ ಉಪಾಧ್ಯಕ್ಷ ಆಟೋ ಕುಮಾರ್, ಸಂತೋಷ್, ಶಿಕ್ಷಣ ಇಲಾಖಾ ಪತ್ತಿನ ಸಹಕಾರ ಸಂಘದ ಸಿಇಓ ಜಯರಾಮ್,ಯುವ ಮುಖಂಡ ರವಿ, ಟೈಲರ್ ಮಂಜು, ಕಲಾಪ್ರಿಯ ಗೋವಿಂದರಾಜು, ಟೈಲರ್ ಗಣೇಶ್, ಜಯಮ್ಮ ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಗ್ನಿಬನ್ನಿರಾಯಸ್ವಾಮಿ ದಿನಾಚರಣೆಯ ಅಂಗವಾಗಿ ಎಲ್ಲರಿಗೂ ಹೊಸಹೊಳಲು ಅಗ್ನಿಬನ್ನಿರಾಯಸ್ವಾಮಿ ಸೇವಾ ಸಮಿತಿಯ ವತಿಯಿಂದ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
– ಶ್ರೀನಿವಾಸ್ ಆರ್.
