ಚಾಮರಾಜನಗರ- ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಮನುಷ್ಯ-ಜನವರ ನಡುವಿನ ಸಂಘರ್ಷ ಮತ್ತೊಮ್ಮೆ ತೀವ್ರ ರೂಪ ಪಡೆದುಕೊಂಡಿದೆ. ಹೂಗ್ಯಂ ವಲಯದ ಅರಣ್ಯದಲ್ಲಿ ಐದು ಹುಲಿಗಳು ಸಾವನ್ನಪ್ಪಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
ಪಶುವೈದ್ಯರ ತಂಡವು ಈಗಾಗಲೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ಹುಲಿಗಳ ಅಂಗಾಂಗಳ ಮಾದರಿಗಳನ್ನು ವಿಶ್ಲೇಷಣೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಾಥಮಿಕ ಮಾಹಿತಿಯಿಂದಾಗಿ, ವಿಷ ಸೇವನೆಯೇ ಈ ಸಾವಿಗೆ ಕಾರಣವಿರಬಹುದು ಎಂಬ ಶಂಕೆ ಮೂಡಿದೆ.
NTCA ಮಾರ್ಗಸೂಚಿ ಪ್ರಕಾರ ತನಿಖೆ:
ಪ್ರಾಣಿಶಾಸ್ತ್ರಜ್ಞರು ಮತ್ತು ಪಶುವೈದ್ಯರ ಮೂರು ತಂಡಗಳು ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದು, NTCA ನಿಯಮಾನುಸಾರ ಮಾದರಿ ಸಂಗ್ರಹ ಮಾಡಲಾಗಿದೆ.
ಹುಲಿಗಳ ಹಿಂಸಾಚಾರದ ಹಿನ್ನಲೆ:
ಮೃತ್ಯುವಿಗೆ ಕೆಲವೇ ದಿನಗಳ ಹಿಂದೆ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಹುಲಿ ದಾಳಿಗಳಿಂದ ಗ್ರಾಮಸ್ಥರು ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಯಳಂದೂರಿನ ರಾಮಯ್ಯನಪೋಡಿಯಲ್ಲಿ ರಂಗಮ್ಮ ಎಂಬ ವೃದ್ಧೆ ಹಾಗೂ ದೇಶಿಪುರದ ಪುಟ್ಟಮ್ಮ ಎಂಬ ಮಹಿಳೆ ಹುಲಿ ದಾಳಿಗೆ ಬಲಿಯಾದರು. ಈ ಸಾವಿನಿಂದ ಸ್ಥಳೀಯರಲ್ಲಿ ಭಯ, ಆಕ್ರೋಶ ಹೆಚ್ಚಾಗಿದ್ದು, ಜನರು ಸೇಡಿನಲ್ಲಿ ವಿಷಪೂರಿತ ಆಹಾರ ನೀಡಿರುವ ಶಂಕೆ ತೀವ್ರವಾಗಿದೆ.
ವಿಚಾರಣೆಗೆ ನಾಲ್ವರು ವಶಕ್ಕೆ:
ಹನೂರು ತಾಲೂಕಿನ ಗಾಜನೂರಿನಲ್ಲಿ ನಾಲ್ವರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು, ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದೆ.
ಇಂತಹ ದುರ್ಘಟನೆಗಳಿಂದ ಮನುಷ್ಯ-ಜೀವಿ ಸಮತೋಲನಕ್ಕೆ ತೀವ್ರ ಧಕ್ಕೆಯಾಗುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಹುಲಿಗಳ ರಕ್ಷಣೆಗೆ ತಕ್ಷಣದ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
