
ಚಾಮರಾಜನಗರ : ಪ್ರಸ್ತುತ ಸಂದರ್ಭದಲ್ಲಿ ಉಂಟಾಗುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪತ್ರಿಕಾ ಮತ್ತು ವಿಧ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದಿನ ದಿನಗಳಲ್ಲಿ ಸಾಕಷ್ಟು ಸಾಂಕ್ರಾಮಿಕ ರೋಗಗಳು ಕಂಡು ಬರುತ್ತಿತ್ತು, ಆದರೇ ಇತ್ತೀಚೆಗೆ ಅವುಗಳ ಸಂಖ್ಯೆ ಕಡಿಮೆಯಾಗಿದೆ. ಅದಾಗ್ಯೂ ಮಲೇರಿಯಾ, ಡೇಂಘೆ, ಚಿಕನ್ ಗುನ್ಯಾ, ಆನೆಕಾಲು ರೋಗ ಹಾಗೂ ಇನ್ನಿತರೆ ರೋಗಗಳು ಆಗಾಗ ಕಂಡುಬರುತ್ತದೆ. ಈ ಸಂದರ್ಭದಲ್ಲಿ ರೋಗಗಳ ಲಕ್ಷಣಗಳು ಹಾಗೂ ಇನ್ನಿತರೆ ಅಗತ್ಯ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 2024 ರಲ್ಲಿ 1285 ಕ್ಷಯರೋಗ ಪ್ರಕರಣಗಳು ಪತ್ತೆಯಾಗಿತ್ತು. ಈ ವರ್ಷದಲ್ಲಿ 220 ಪ್ರಕರಣಗಳು ಪತ್ತೆಯಾಗಿದೆ. ಕಳೆದ ವರ್ಷದಲ್ಲಿ 13 ಗ್ರಾಮ ಪಂಚಾಯಿತಿಗಳನ್ನು ಕ್ಷಯ ಮುಕ್ತ ಎಂದು ಘೋಷಣೆ ಮಾಡಲಾಗಿದೆ. ಈ ವರ್ಷದಲ್ಲಿ 35 ಗ್ರಾ.ಪಂ ಗಳನ್ನು ತೆಗೆದುಕೊಂಡಿದ್ದು, ಜಿಲ್ಲೆಯನ್ನು ಕ್ಷಯಮುಕ್ತಗೊಳಿಸಲು ಶ್ರಮಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರಶೇಖರ್, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ಸುರೇಶ್, ಆರೋಗ್ಯ ಇಲಾಖೆಯ ದೊರೆಸ್ವಾಮಿ ನಾಯಕ್ ಹಾಗೂ ಇತರರು ಭಾಗವಹಿಸಿದ್ದರು.
ವರದಿ: ಶ್ರೀ ಸಾಯಿ ಎಸ್ ಮಂಜು