ಚಾಮರಾಜನಗರ:- ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಸೇವೆ ಸದಾ ಸ್ಮರಣೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಬಿ.ಟಿ.ಕವಿತಾ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಪೊಲೀಸರ ಸೇವೆಯನ್ನು ಸ್ಮರಿಸಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಎಲ್ಲ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅವರ ಕುಟುಂಬದವರ ಆರೋಗ್ಯ ಸಲುವಾಗಿ ಉಪಯೋಗಿಸಲಾಗುತ್ತದೆ ಎಂದರು.
ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಏಪ್ರಿಲ್ 2 ರಂದು ಜಾರಿಗೆ ಬಂದಿತು. ಇದರ ಅಂಗವಾಗಿ ಪೊಲೀಸ್ ಧ್ವಜಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ರಾಜ್ಯದ ಎಲ್ಲ ಪೊಲೀಸ್ ಘಟಕಗಳಲ್ಲೂ ಕೂಡ ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

2024-25 ಸಾಲಿನಲ್ಲಿ 12 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿವೃತ್ತರಾಗಿದ್ದಾರೆ. ಈ ಸಾಲಿನಲ್ಲಿ ವೈದ್ಯಕೀಯ ಧನ ಸಹಾಯವಾಗಿ ಒಟ್ಟು7,53,747 ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪಿಎಸ್ಐ ವಿಜಯಕುಮಾರ್ ಮಾತನಾಡಿ, ಮೈಸೂರು, ಚಾಮರಾಜನಗರ ಜಿಲ್ಲಾ ಪೊಲೀಸ್ ಘಟಕದಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಸುದೀರ್ಘವಾದ ಸೇವಾ ಅವಧಿಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದೇನೆ. ಇಲಾಖೆಯಲ್ಲಿ ಕರ್ತವ್ಯದ ಒತ್ತಡ ಹೆಚ್ಚು ಇರುತ್ತದೆ.

ಆದರೂ ಕೂಡ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆರೋಗ್ಯ ಸೇವೆ ದೊರೆಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಶಿಧರ್, ಡಿವೈಎಸ್ಪಿಗಳಾದ ಲಕ್ಷಮಯ್ಯ, ಧರ್ಮೇಂದ್ರ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ: ಶ್ರೀ ಸಾಯಿ ಎಸ್ ಮಂಜು
