ಚಾಮರಾಜನಗರ, ಜೂನ್ 10: ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಬಂದಿದ್ದ ವ್ಯಕ್ತಿ ಮೇಲೆ ಹುಲಿ (Tiger) ದಾಳಿ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯದಲ್ಲಿರುವ ರಾಮಯ್ಯನ ಪೋಡಿ ಎಂಬಲ್ಲಿ ನಡೆದಿದೆ.
ಹುಲಿ ದಾಳಿಯಿಂದ ರವಿ ಎಂಬುವರ ತಲೆ, ಕೈ, ಕಾಲಿಗೆ ಗಾಯವಾಗಿದೆ. ಗಾಯಗೊಂಡಿರುವ ರವಿ ಅವರನ್ನು ಚಾಮರಾಜನಗರ ಸರ್ಕಾರಿ ಭೋದನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಬ್ಬಕೆಂದು ರವಿ ಚಿಕ್ಕಮ್ಮನ ಮನೆಗೆ ಬಂದಿದ್ದರು. ಸೋಮವಾರ (ಜೂ.09) ರಾತ್ರಿ ಮೂತ್ರ ವಿಸರ್ಜನೆಗೆ ಮನೆಯಿಂದ ಹೊರ ಬಂದಾಗ ಹುಲಿ ದಾಳಿ ಮಾಡಿದೆ. ಅದೃಷ್ಟವಶಾತ್ ರವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಮಯ್ಯನ ಪೋಡಿನಲ್ಲಿ ಹುಲಿ ದಾಳಿಯಿಂದ ರವಿ ಎಂಬುವರು ತೀವ್ರ ಸ್ವರೂಪವಾಗಿ ಗಾಯಗೊಂಡಿದ್ದಾರೆ. ಹುಲಿ ದಾಳಿ ನಡೆಸಿದ ಸ್ಥಳದಲ್ಲಿ ಮೂರು ಕುಟುಂಬಗಳಿವೆ. ಅವರನ್ನು ಸಮೀಪದ ಆಶ್ರಮ ಶಾಲೆಯಲ್ಲಿ ಆಶ್ರಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ವರದಿಯಾಗಿದೆ.
