ಚಾಮರಾಜನಗರ: ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ವತಿಯಿಂದ ಯುವ ಪತ್ರಕರ್ತ ಹಾಗೂ ಸಾಹಿತಿ ಮಣಿಕಂಠ ( ಆ.ಸಿ.ಮ) ಅವರಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು ಮಾತನಾಡಿ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಯುವ ಪತ್ರಕರ್ತ ಮಣಿಕಂಠ ಅವರನ್ನು ನಮ್ಮ ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಣಿಕಂಠ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ವರದಿಗಾರರಾಗಿ ತಮದೇ ಆದ ಛಾಪು ಮೂಡಿಸಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ವಿಶೇಷ ವರದಿಯನ್ನು ಬರೆದಿದ್ದಾರೆ ಎಂದರು.
ಯುವ ಪತ್ರಕರ್ತ ಮಣಿಕಂಠ ಪತ್ರಿಕಾರಂಗದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನವಾಚನ ಮಾಡಿದ್ದಾರೆ. ಅವರು ರಚಿಸಿರುವ ನೀಲನೆತ್ತರ ಎಂಬ ಕವನ ಸಂಕಲನ ಇದು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಗಿದೆ. ಸುರಾಗಿ ಕಾವ್ಯನಾಮದಲ್ಲಿ ಬರೆಯುವ ಕವಿತೆಗಳು ಸಮಾಜದ ಅಂಕು ಡೊಂಕುಗಳನ್ನು ಟೀಕೆ ಟಿಪ್ಪಣಿ ಒಳಪಡಿಸುತ್ತಿದೆ ಎಂದರು.

ಸಾಹಿತ್ಯ ಕೃಷಿಯೊಂದಿಗೆ ಪತ್ರಿಕಾ ವೃತ್ತಿಯನ್ನು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಯಾಶೀಲ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಅಂಕು ಡೊಂಕುಗಳನ್ನು ಬೆಳಕಿಗೆ ತರುವಲ್ಲಿ ಮೊದಲ ಸಾಲಿನ ಪತ್ರಕರ್ತ. ಪ್ರಶ್ನಿಸುವ ಮನೋಭವನ್ನು ರಕ್ತಗತವಾಗಿ ಬೆಳೆಸಿಕೊಂಡು ಬಂದಿರುವ ಮಣಿಕಂಠ ಅವರು ಬರವಣಿಗೆಯಲ್ಲಿ ಮೊನಚು ತನವನ್ನು ದಿನದಿಂದ ದಿನಕ್ಕೆ ವೃದ್ಧಿಸಿಕೊಂಡು ಹೋಗುತ್ತಿದ್ದಾರೆ ಅವರ ವೃತ್ತಿಯಲ್ಲಿ ಯಶಸ್ಸುಗಳಿಸಲಿ ಎಂದು ಹೇಳಿದರು.
ಅರಣ್ಯ, ಕೃಷಿ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ, ಸ್ಥಳೀಯ ಸಂಸ್ಥೆ, ಕ್ರೀಡೆ, ಜನಪದ, ಶಿಕ್ಷಣ ಹಾಗೂ ಇತ್ಯಾದಿ ವಿಷಯಗಳ ಕುರಿತು ಬರೆದಿರುವ ವರದಿಗಳು ಗಮನಸೆಳೆದಿವೆ. ಇವುಗಳಲ್ಲಿ ಅನೇಕ ವರದಿಗಳು ಪರಿಣಾಮವನ್ನು ಬೀರಿ ಫಲಶೃತಿಯಾಗಿವೆ. ಇಂತಹ ಪತ್ರಕರ್ತರ ಸಂಖ್ಯೆ ಹೆಚ್ಚಾಗಬೇಕು. ಇಂತಹ ಪತ್ರಕರ್ತರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು ಭವಿಷ್ಯದಲ್ಲಿ ಇವರಿಗೆ ಅತ್ಯುತ್ತಮ ಪತ್ರಕರ್ತರಾಗುವ ಘನತೆಯುಳ್ಳ ಹುದ್ದೆಗಳನ್ನು ನಿಭಾಯಿಸುವ ಸಾಮರ್ಥ್ಯವಿದೆ ಎಂದು ತಿಳಿದರು.
ಪತ್ರಕರ್ತ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಪ್ರಶಾಂತ್ ನಾಗವಳ್ಳಿ ಮಾತನಾಡಿ, ವಿಭಿನ್ನ ಆಲೋಚನೆ, ವಿಶಿಷ್ಟ ಬರವಣಿಗೆ ಶೈಲಿ ಮತ್ತು ಸಾಮಾಜಿಕ ಬದ್ಧತೆಯುಳ್ಳ ಪತ್ರಕರ್ತರಾಗಿ ಮಣಿಕಂಠ ಜನ ಸಮುದಾಯದ ದುಃಖ ದುಮ್ಮಾನಗಳಿಗೆ ಧ್ವನಿಯಾಗಿ ದುಡಿಯುತ್ತಿದ್ದಾರೆ. ಇವರನ್ನು ಪತ್ರಕರ್ತನಾಗಲ್ಲದೆ ಸಹೋದರನಾಗಿಯೂ ಸಹ ಕಾಣುತ್ತೇನೆ. ಮಣಿಕಂಠ ಅವರು ಹಿರಿಯ ಪತ್ರಕರ್ತರ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆದು ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಶ್ರೀ ಸಾಯಿ ಮಂಜು, ಉಲ್ಲಾಸ್ ಎಂ. ನಾಗವಳ್ಳಿ, ಕಿರಣ್ ಮಾದರಹಳ್ಳಿ ಹಾಜರಿದ್ದರು.
