ಹಾಸನ – ನಗರದ ಪ್ರಜಾಸೌಧದ ಮುಂಭಾಗದಲ್ಲಿ ದಿನಾಂಕ 20-01-2026 (ಮಂಗಳವಾರ) ಬೆಳಿಗ್ಗೆ 10 ಗಂಟೆಗೆ 208ನೇ ಭೀಮಾ ಕೋರೆಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹಾಸನದ ಹಿರಿಯ ದಲಿತ ಮುಖಂಡ ಎಚ್.ಕೆ.ಸಂದೇಶ್ ತಿಳಿಸಿದ್ದಾರೆ.
ಪಟ್ಟಣದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಶಕ್ಕೆ ಸಂವಿಧಾನ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’ ಎಂದು ಹೇಳಿದ್ದಾರೆ. ಇಂದಿನ ಸ್ಥಿತಿಗತಿಗಳನ್ನು ಅರಿಯಲು ಮತ್ತು ಕಳೆದುಕೊಂಡ ಹಕ್ಕುಗಳನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ಇತಿಹಾಸದ ಅರಿವು ಅತ್ಯಂತ ಅಗತ್ಯ” ಎಂದು ಹೇಳಿದರು.

ಬ್ರಿಟಿಷರ ಆಡಳಿತದ ಅವಧಿಯಲ್ಲಿ ಮಹಾರ್ ಸಮುದಾಯದ ಸೈನಿಕರು ಭೀಮಾ ಕೋರೆಗಾವ್ ಯುದ್ಧದಲ್ಲಿ ಶೌರ್ಯ ಪ್ರದರ್ಶಿಸಿ ಇತಿಹಾಸ ನಿರ್ಮಿಸಿದ್ದರು. ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಪರಿಶಿಷ್ಟ ಜಾತಿ–ವರ್ಗ ಮತ್ತು ಹಿಂದುಳಿದ ಸಮುದಾಯಗಳಿಗೆ ಈ ವಿಜಯದ ಫಲವಾಗಿ ಇಂಗ್ಲಿಷ್ ಶಿಕ್ಷಣ ದೊರೆಯಲು ಕಾನೂನು ರೂಪುಗೊಂಡಿತು ಎಂದು ವಿವರಿಸಿದರು. ಈ ಯುದ್ಧವನ್ನು ಇತಿಹಾಸದ ಪಠ್ಯಪುಸ್ತಕಗಳಲ್ಲಿ ಮೂರನೇ ಆಂಗ್ಲೋ–ಮರಾಠ ಯುದ್ಧವೆಂದು ದಾಖಲಿಸಲಾಗಿದೆ ಎಂದು ಹೇಳಿದರು.

ಮರಾಠ ರಾಜ ಛತ್ರಪತಿ ಶಿವಾಜಿ ತಮ್ಮ ಸೈನ್ಯದಲ್ಲಿ ಎಲ್ಲಾ ವರ್ಗದ ಜನರಿಗೆ ಅವಕಾಶ ನೀಡಿದ್ದರೂ, ಅವರ ನಿಧನದ ನಂತರ ಬ್ರಾಹ್ಮಣ ಪೇಶ್ವೆಗಳ ಆಳ್ವಿಕೆಯಲ್ಲಿ ಶ್ರೇಣಿಕೃತ ವ್ಯವಸ್ಥೆ ಜಾರಿಗೆ ಬಂದಿತು. ಇದರ ಪರಿಣಾಮ ಮಹಾರ್ ಸೈನಿಕರನ್ನು ಮರಾಠ ಸೈನ್ಯದಿಂದ ಹೊರಹಾಕಲಾಯಿತು. ಬಳಿಕ ಬ್ರಿಟಿಷರು ಅವರನ್ನು ತಮ್ಮ ಸೈನ್ಯಕ್ಕೆ ಸೇರಿಸಿಕೊಂಡು ಮಹಾರ್ ರೆಜಿಮೆಂಟ್ ಸ್ಥಾಪಿಸಿ ಆಧುನಿಕ ಯುದ್ಧ ತರಬೇತಿ ನೀಡಿದರು ಎಂದು ಸಂದೇಶ್ ವಿವರಿಸಿದರು.
1817 ಡಿಸೆಂಬರ್ 31ರಂದು ಆರಂಭವಾದ ಯುದ್ಧವು 1818 ಜನವರಿ 1ರಂದು ಅಂತ್ಯಗೊಂಡು ಪೇಶ್ವ ಬಾಜಿರಾಯನ ಸೈನ್ಯ ಸೋಲೊಪ್ಪಿಕೊಂಡಿತು. ಈ ವಿಜಯವನ್ನು ಸ್ಮರಿಸಲು 1823ರಲ್ಲಿ ಬ್ರಿಟನ್ ಮಹಾರಾಣಿಯವರು ಭೀಮಾ ನದಿಯ ದಡದ ಕೋರೆಗಾವ್ ಗ್ರಾಮದಲ್ಲಿ 75 ಅಡಿ ಎತ್ತರದ ವಿಜಯ ಸ್ತಂಭವನ್ನು ನಿರ್ಮಿಸಿ, ಯುದ್ಧದಲ್ಲಿ ಮಡಿದ 22 ಸೈನಿಕರ ಹೆಸರುಗಳನ್ನು ಕೆತ್ತಿಸಿದ್ದಾರೆ ಎಂದು ತಿಳಿಸಿದರು.

ಇಂತಹ ಮಹತ್ವದ ಐತಿಹಾಸಿಕ ಯುದ್ಧದ ಕುರಿತು ಭಾರತದ ಇತಿಹಾಸ ಪುಸ್ತಕಗಳಲ್ಲಿ ಸೂಕ್ತ ದಾಖಲೆಗಳಿಲ್ಲದಿರುವುದು ದುರಂತ ಎಂದು ಅವರು ಅಭಿಪ್ರಾಯಪಟ್ಟರು. ಮುಂದಿನ ಪೀಳಿಗೆಗೆ ಈ ಇತಿಹಾಸವನ್ನು ಪರಿಚಯಿಸುವ ಉದ್ದೇಶದಿಂದ 208ನೇ ವರ್ಷದ ವಿಜಯೋತ್ಸವವನ್ನು ಪರಿಶಿಷ್ಟ ಸಮುದಾಯದ ಒಕ್ಕೂಟದ ಮೂಲಕ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಎಲ್ಲಾ ಸಮುದಾಯದ ಜನರು ಜಾತಿ ಮತ್ತು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಭೀಮಾ ಕೋರೆಗಾವ್ ಆಚರಣ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಕೆ.ಸಂದೇಶ್, ಸಂವಿಧಾನ ಓದು ಅಭಿಯಾನದ ಮುಖ್ಯಸ್ಥ ರಾಜು ಗೊರೂರು, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆರ್.ಮಂಜುನಾಥ್ (ಕುರುವಂಕ) ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
