ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಜೈನ ಧರ್ಮ ಇಂದು ಜೀವಂತವಾಗಿ ಉಳಿದಿರುವುದಕ್ಕೆ ಕಾರಣ ಕೇವಲ ತೀರ್ಥಂಕರರ ಉಪದೇಶ ಮಾತ್ರವಲ್ಲ, ಅದನ್ನು ಸಂರಕ್ಷಿಸಿ, ಸಂಹಿತೆಗೊಳಿಸಿ, ಜೀವನೋಪಯೋಗಿಯಾಗಿ ರೂಪಿಸಿದ ಆಚಾರ್ಯ–ಶಾಸ್ತ್ರೀ ಪರಂಪರೆ. ವಿಶೇಷವಾಗಿ ಜೈನ ಸಿದ್ಧಾಂತಗಳಿಗೆ ಪೂರಕವಾದ ಶಾಶ್ವತ ಕೊಡುಗೆ ನೀಡಿದ ಆಚಾರ್ಯ ಪರಂಪರೆಯನ್ನು ಸ್ಮರಿಸಲು ಇಚ್ಛಿಸುತ್ತೇನೆ ಎಂದು 5ನೇ ದಕ್ಷಿಣ ಭಾರತ ಅರ್ಚಕ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಪಾದೂರು ಸುದರ್ಶನ ಕುಮಾರ್ ಇಂದ್ರ ಹೇಳಿದರು.
ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಜ. 6 ಮತ್ತು 7 ರಂದು ನಡೆಯುತ್ತಿರುವ 5ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತದ ದಿವ್ಯ ಸಂದೇಶವನ್ನು ಲೋಕಕ್ಕೆ ನೀಡಿದ ತೀರ್ಥಂಕರ ಪರಂಪರೆಯ ಪುಣ್ಯಭೂಮಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಇಂದು ನಾವು ದಕ್ಷಿಣ ಭಾರತ ಮಟ್ಟದ ಜೈನ ಅರ್ಚಕ ಸಮ್ಮೇಳನಕ್ಕೆ ಸೇರಿರುವುದು ಅತ್ಯಂತ ಧನ್ಯತೆಯ ವಿಷಯವಾಗಿದೆ. ಜೈನ ಧರ್ಮವು ಸಂಯಮ, ಶ್ರದ್ಧೆ ಮತ್ತು ಶಾಸ್ತ್ರನುಸರಣೆಯ ಮೇಲೆ ನಿಂತ ಶಾಶ್ವತ ಧರ್ಮ. ಧರ್ಮದ ಆಚರಣಾತ್ಮಕ ರೂಪವನ್ನು ಸಮಾಜದೊಳಗೆ ಜೀವಂತವಾಗಿರಿಸುವ ಮಹತ್ತರ ಹೊಣೆಗಾರಿಕೆ ಹಾಗೂ ಜೈನ ಧರ್ಮದ ಜೀವಂತ ಹರಿವನ್ನು ಸಮಾಜದೊಳಗೆ ನಿರಂತರವಾಗಿ ಸಾಗಿಸುವಲ್ಲಿ ಪುರೋಹಿತ, ಪಂಡಿತ, ಅರ್ಚಕ, ಉಪಾಧ್ಯಾಯ ಮತ್ತು ಇಂದ್ರ ಇವರ ಮೇಲಿದೆ.

ಕರ್ನಾಟಕವು ಜೈನ ಧರ್ಮದ ಆಚಾರ್ಯ-ಶಾಸ್ತ್ರೀ ಪರಂಪರೆಯ ಮಹಾ ಪೀಠಭೂಮಿ ಆಗಿದೆ. ಶ್ರವಣಬೆಳಗೊಳದಲ್ಲಿ ಆರಂಭಗೊಂಡು ದಕ್ಷಿಣ ಭಾರತಕ್ಕೆ ವಿಸ್ತರಿಸಿ ಬೆಳೆದು ನಿಂತಿದೆ. ಜೈನ ಆಚಾರ್ಯರು, ಯತಿಗಳು, ಶಾಸ್ತ್ರಿಗಳು ಕರ್ನಾಟಕದ ಧಾರ್ಮಿಕ-ಸಾಂಸ್ಕೃತಿಕ ಇತಿಹಾಸವನ್ನು ರೂಪಿಸಿದ್ದಾರೆ. ಕ್ರಿ.ಪೂ. 3ನೇ ಶತಮಾನದಲ್ಲಿ ಚಂದ್ರಗುಪ್ತ ಮೌರ್ಯ ಹಾಗೂ ಭದ್ರಬಾಹು ಆಚಾರ್ಯರು ಶ್ರವಣಬೆಳಗೊಳಕ್ಕೆ ಆಗಮನ ಮಾಡಿದ ನಂತರ ಕರ್ನಾಟಕ ಜೈನ ಧರ್ಮದ ಕೇಂದ್ರವಾಗಿ, ದಿಗಂಬರ ಜೈನ ಆಚಾರ್ಯ ಪರಂಪರೆ ಬೆಳೆದುಬಂದಿತು.
ಇದನ್ನು ಓದಿ: ಚನ್ನರಾಯಪಟ್ಟಣ : ತಾಲೂಕಿನ ಏತನೀರಾವರಿಗಳ ಕೊಡುಗೆ ಕಾಂಗ್ರೆಸ್ ಸರ್ಕಾರದ್ದು- ಮಾಜಿ ಎಂ ಎಲ್ ಸಿ ಗೋಪಾಲಸ್ವಾಮಿ
ಕುಂದ ಕುಂದಾಚಾರ್ಯರು ಸಮಯಸಾರ, ಪ್ರವಚನಸಾರ, ನಿಯಮಸಾರ ಕೃತಿಗಳನ್ನು ರಚನೆ ಮಾಡಿ ದಿಗಂಬರ ತತ್ತ್ವ ಶಾಸ್ತ್ರವನ್ನು ಶಿಖರಕ್ಕೆ ಏರಿಸಿದವರು. ಸಮಂತಭದ್ರಾಚಾರ್ಯರು ರತ್ನಕರಂಡಕ ಶ್ರಾವಕಾಚಾರ ಕೃತಿಯ ಮೂಲಕ ಭಕ್ತಿ ಮತ್ತು ತರ್ಕ ಎರಡರ ಸಂಯೋಜನೆ ಮಾಡಿ ಕರ್ನಾಟಕದಲ್ಲಿ ಶ್ರಾವಕ ಸಂಸ್ಕಾರ ಪದ್ಧತಿಗೆ ದಿಕ್ಕನ್ನು ನೀಡಿದವರು.
ಹಳಗನ್ನಡದ ಕವಿಗಳು ಹೆಚ್ಚಿನವರು ಜೈನ ಪುರೋಹಿತ ವರ್ಗದಿಂದ ಬಂದವರು. ಇವರು ಕೇವಲ ಪೂಜಾ ವಿಧಿ-ವಿಧಾನಗಳಲ್ಲದೆ ಸಂಸ್ಕೃತ ಮತ್ತು ಪ್ರಾಕೃತದಲ್ಲಿದ್ದ ಆಗಮಗಳನ್ನು ಕನ್ನಡಕ್ಕೆ ಸರಳೀಕರಿಸಿ ಜನ ಸಾಮಾನ್ಯರಿಗೆ ತಲುಪಿಸಿದರು. ಬಸದಿಗಳಲ್ಲಿರುವ ಅಮೂಲ್ಯ ಹಸ್ತಪ್ರತಿಗಳನ್ನು ಕಾಪಾಡಿಕೊಂಡು ಬಂದ ಕೀರ್ತಿ ನಮ್ಮ ಅರ್ಚಕ ಪರಂಪರೆಗೆ ಸಲ್ಲುತ್ತದೆ. ಇದನ್ನು ಅರಿತು, ಅನುಸರಿಸಿ, ಮುಂದಿನ ಪೀಳಿಗೆಗೆ ಹರಿಸುವುದು ಮುನಿ ಮಹಾರಾಜರ, ಭಟ್ಟಾರಕರ, ವಿದ್ವಾಂಸರ, ಪಂಡಿತರ ಹಾಗೂ ಅರ್ಚಕ–ಶಾಸ್ತ್ರಿಗಳ ಧರ್ಮವಾಗಿದೆ.
ಜೈನ ಧರ್ಮದಲ್ಲಿ ಅರ್ಚಕ ಅಥವಾ ಇಂದ್ರ ಎಂಬ ಪದವು ಕೇವಲ ವೃತ್ತಿಯಲ್ಲ, ಅದೊಂದು ಪವಿತ್ರ ಜವಾಬ್ದಾರಿ. ಪುರಾಣಗಳ ಪ್ರಕಾರ, ಭಗವಾನ್ ಆದಿನಾಥರ ಕಾಲದಲ್ಲಿಯೇ ಸಮಾಜದ ಶಿಸ್ತು ಮತ್ತು ಧಾರ್ಮಿಕ ವಿಧಿಗಳನ್ನು ನಡೆಸಿಕೊಡಲು ‘ಕುಲಕರ’ರ ವ್ಯವಸ್ಥೆ ಇತ್ತು. ಇಂದ್ರನ ಸಾಂಕೇತಿಕತೆಯಾಗಿ, ಪಂಚಕಲ್ಯಾಣಕಗಳಲ್ಲಿ ಸೌಧರ್ಮೇಂದ್ರನು ಹೇಗೆ ತೀರ್ಥಂಕರರ ಸೇವೆಯನ್ನು ಮಾಡುತ್ತಾನೋ, ಹಾಗೆಯೇ ಭೂಮಿಯ ಮೇಲೆ ಜಿನಾಲಯಗಳಲ್ಲಿ ದೇವರ ಪೂಜೆ ಮಾಡುವ ಅರ್ಚಕರನ್ನು ‘ಇಂದ್ರ’ ಎಂದು ಕರೆಯಲಾಗುತ್ತದೆ: ಸಮಾಜಕ್ಕೆ ಹಿತವನ್ನು ಬಯಸುವವನೇ ‘ಪುರೋಹಿತ’. ಜಿನವಾಣಿಯನ್ನು ಅಭ್ಯಾಸ ಮಾಡಿ ಶ್ರಾವಕರಿಗೆ ಬೋಧಿಸುವವರು ‘ಉಪಾಧ್ಯಾಯ’ ಅಥವಾ ‘ಪಂಡಿತ’. ಮುನಿಗಳು ಆತ್ಮ ಕಲ್ಯಾಣಕ್ಕಾಗಿ ತಪಸ್ಸು ಮಾಡಿದರೆ, ಅರ್ಚಕರು ಸಂಸಾರಿಗಳಾದ ಶ್ರಾವಕರಿಗೆ ಧರ್ಮದ ಹಾದಿಯನ್ನು ತೋರಿಸುವ ಮಾರ್ಗದರ್ಶಕರು.

ಇಂದು ಪೌರೋಹಿತ್ಯ ಎಲ್ಲೆಡೆ ತಿರಸ್ಕಾರಕ್ಕೆ ಒಳಗಾಗಿದೆ. ಇವರ ಜೀವನೋಪಾಯಕ್ಕೆ ಬೇಕಾದ ಆದಾಯವಿಲ್ಲದೆ, ಜೈನ ಪುರೋಹಿತರು ತಮ್ಮ ವೃತ್ತಿಯನ್ನು ತೊರೆದು ಲೌಕಿಕ ವಿದ್ಯಾವಂತರಾಗಿ, ಸರ್ಕಾರಿ ಹಾಗೂ ಖಾಸಗಿ ಹುದ್ದೆಗಳಿಗೆ ಸೇರುತ್ತಿರುವುದನ್ನು ಕಾಣಬಹುದು. ಪುರೋಹಿತ ವರ್ಗ ತನ್ನ ವೃತ್ತಿಯನ್ನು ತೊರೆದರೆ, ಜಿನಾಲಯಗಳು ಇನ್ನೂ ಹೀನಸ್ಥಿತಿಗೆ ಬರುವ ಸಾಧ್ಯತೆಗಳಿವೆ. ಒಬ್ಬ ಪುರೋಹಿತ ಅನೇಕ ಬಸದಿಗಳಲ್ಲಿ ಪೂಜೆ ಮಾಡುವ ಪರಿಸ್ಥಿತಿ ಬಂದೊದಗಿದೆ. ಶ್ರಾವಕರಿಲ್ಲದೆ ಅಥವಾ ಇವರ ಅನಾಸಕ್ತಿಯ ಕಾರಣದಿಂದ ನಿತ್ಯಪೂಜೆಗಳನ್ನು ನೋಡುವವರಿಲ್ಲದ ಸ್ಥಿತಿಗಳಿವೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರದ ಸಹಾಯದೊಂದಿಗೆ ನಾಡಿನ ಅನೇಕ ಜಿನಮಂದಿರಗಳ ಜೀರ್ಣೋದ್ಧಾರದ ಕಾರ್ಯಗಳು ಜರುಗಿವೆ. ವೈಭಯುತವಾದ ಪಂಚಕಲ್ಯಾಣ ಮಹೋತ್ಸವಗಳು ಸಂಪನ್ನಗೊಂಡಿದೆ. ಹೊಸ ಕ್ಷೇತ್ರಗಳ ನಿರ್ಮಾಣಗಳಾಗುತ್ತಲಿದೆ. ಆದರೆ ಅರ್ಚಕರ ಕುರಿತಾದ ಯೋಜನೆ ಹಾಗೂ ಯೋಚನೆಗಳನ್ನು ಸಮಾಜ ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ಸರ್ಕಾರ ಪುರೋಹಿತರಿಗೆ ಜೀವನ ನಿರ್ವಹಣೆಯ ಭತ್ಯೆಯ ಸೌಲಭ್ಯವನ್ನು ಕರ್ನಾಟಕದಲ್ಲಿ ಜಾರಿ ಮಾಡಿದ್ದರೂ, ಆಡಳಿತ ಮಂಡಳಿಯನ್ನು ನಿಯಮಾನುಸಾರ ನೋಂದಣಿ ಮಾಡದೆ, ಪುರೋಹಿತರು ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಗಮನಿಸಬಹುದು.
ಪೂಜೆ ಮಾಡುವವರೂ ಮಾಡಿಸುವವರೂ ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಮಾತ್ರ ಅದರಿಂದ ನಾಡಿಗೆ ಶ್ರೇಯೋಭಿವೃದ್ಧಿ ಸಾಧ್ಯ. ದೇವಸ್ಥಾನ, ಮಂದಿರಗಳ ಜೀರ್ಣೋದ್ದಾರದ ಜೊತೆಗೆ ಅರ್ಚಕರಿಗೆ ತರಬೇತಿ, ಅವರಿಗೆ ಸೂಕ್ತ ಸೌಕರ್ಯ ಸೌಲಭ್ಯಗಳನ್ನು ಒದಗಿಸುವುದೂ ಅತ್ಯಾವಶ್ಯಕವಾಗಿದೆ.
ಪುರೋಹಿತರ ಕರ್ತವ್ಯ, ಕೌಶಲ್ಯವೃದ್ಧಿ ಹಾಗೂ ಶ್ರೇಯೋಭಿವೃದ್ಧಿಯಲ್ಲಿ ಮಠಮಾನ್ಯಗಳ ಪಾತ್ರ ಗಣನೀಯವಾಗಿದೆ. ಭಟ್ಟಾರಕರು ತಮ್ಮ ಸೀಮೆಯ ವ್ಯಾಪ್ತಿಗೆ ಸಂಬಂಧಿಸಿದ ಬಸದಿಗಳ ಆಡಳಿತ ಮಂಡಳಿಗಳ ಸಭೆಯನ್ನು ಕಾಲ ಕಾಲಕ್ಕೆ ನಡೆಸಿ, ಪ್ರಾಥಮಿಕ ಮಾಹಿತಿಗಳನ್ನು ಕಲೆಹಾಕಿ, ವಸ್ತುಸ್ಥಿತಿಯನ್ನು ತಿಳಿದುಕೊಳ್ಳುವುದು. ಆಡಳಿತ ಮಂಡಳಿಗಳಿಗೆ ಸೂಕ್ತ ಸೂಚನೆಗಳನ್ನು ನೀಡುವುದರ ಮೂಲಕ ಅರ್ಚಕರ ಆರ್ಥಿಕ ಸ್ಥಿತಿ ಹಾಗೂ ಸೌಲಭ್ಯಗಳನ್ನು ಉತ್ತಮ ಗೊಳಿಸುವಲ್ಲಿ ಕ್ರಿಯಾಶೀಲರಾಗಬೇಕಾಗಿ ಒತ್ತಾಯಿಸುತ್ತೇನೆ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಜೈನ ಮಂದಿರಗಳಲ್ಲಿ ದಿನನಿತ್ಯ ಪೂಜೆ ಮಾಡುವ ಜತೆಗೆ ಸಮಾಜದಲ್ಲಿ ಜನರಿಗೆ ಉತ್ತಮ ಸಂಸ್ಕಾರ, ಸನ್ಮಾರ್ಗದತ್ತ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿರುವ ಅರ್ಚಕರ ಕೊಡುಗೆ ಅಪಾರವಿದೆ. ಬೆಳೆ-ಮಳೆ ಕಡಿಮೆ ಆದಾಗಲೂ ನಾವೆಲ್ಲಾ ಅರ್ಚಕರಿಂದ ಪೂಜೆ ಮಾಡಿಸುತ್ತೇವೆ. ಲೋಕಕಲ್ಯಾಣಕ್ಕಾಗಿ ನಿತ್ಯ ಪೂಜೆ, ಸಮಾಜ ತಿದ್ದುವುದರಲ್ಲಿಯೂ ಅರ್ಚಕರ ಕಾರ್ಯ ಅನನ್ಯವಾಗಿದೆ ಎಂದು ಹೇಳಿದರು.
ಪುರಾತನ ಕಾಲದಿಂದಲೂ ಜೈನ ಧರ್ಮಕ್ಕೆ ತನ್ನದೇ ಇದೆ ಧಾರ್ಮಿಕ ಶಕ್ತಿ ತತ್ವ ಆದರ್ಶ ಇದೆ. ಸರ್ವರನ್ನು ಗೌರವಿಸುವ ಸರ್ವರಿಗೂ ಶಕ್ತಿ ತುಂಬವ ಧರ್ಮ ಎಂದರೆ ಅದು ಜೈನಧರ್ಮ ಎಂದರು. ಜಗತ್ತಿನಲ್ಲಿ ಶ್ರವಣಬೆಳಗೊಳ ಕ್ಷೇತ್ರವು ಕೊಟ್ಯಂತರ ಜನರಿಗೆ ಒಳ್ಳೆಯ ದಿಕ್ಕಿನಲ್ಲಿ ಸಾಗುವಂತೆ ಆಶೀರ್ವಾದ ಮಾಡಿದೆ. ದೇವರು ಸ್ವರೂಪದ ಕರ್ಮಯೋಗಿ ದಿವಂಗತ ಚಾರುಕೀರ್ತಿ ಭಟ್ಟಾರಕರು ಶ್ರವಣಬೆಳಗೊಳ ಕ್ಷೇತ್ರವನ್ನು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಬೆಳೆಸುವದರೊಂದಿಗೆ ಜಗತ್ತಿಗೆ ಪರಿಯಚಯಿಸಿದರು ಎಂದು ಸ್ಮರಿಸಿದರು.
ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು.
ದಕ್ಷಿಣ ಭಾರತ ಜೈನ ಅರ್ಚಕರ ಸಂಘದ ಅಧ್ಯಕ್ಷ ಎಸ್.ಎಂ.ಸನ್ಮತಿಕುಮಾರ್, ಪ್ರಧಾನ ಕಾರ್ಯದರ್ಶಿ ಡಾ. ಎಚ್.ಪಿ.ಮೋಹನಕುಮಾರ ಶಾಸ್ತಿç, ಕಾರ್ಯಾಧ್ಯಕ್ಷ ತವನಪ್ಪ ಪಂಡಿತ, ನಿಕಟಪೂರ್ವ ಅಧ್ಯಕ್ಷ ಶಾಂತಿನಾಥ ಪಾರ್ಶ್ವನಾಥ ಉಪಾದ್ಯೆ, ಶೀಲಾ ಅನಂತರಾಜ್, ಜಿ.ಪಿ.ಪದ್ಮಕುಮಾರ್ ಮುಂತಾದವರಿದ್ದರು.
– ಮಂಜುನಾಥ್ ಐ ಕೆ.
