ಚನ್ನರಾಯಪಟ್ಟಣ, ಜೂನ್ 12: ಇಲ್ಲಿನ ಗಾಂಧಿ ಸರ್ಕಲ್ನಲ್ಲಿ ಸ್ಥಿತಿಯಲ್ಲಿರುವ ರಾಯರ ರಂಗಮಂದಿರದಲ್ಲಿ ಗುರುವಾರದಂದು ವೈಭವದ ನೃತ್ಯ ಕಾರ್ಯಕ್ರಮ ಹಾಗೂ ಭಕ್ತಿ ಸೇವೆಯು ಜರುಗಿತು. ಮಂತ್ರಾಲಯ ಪೀಠಾಧಿಪತಿಗಳ ಆಶೀರ್ವಾದದಲ್ಲಿ ಬೆಳಿಗ್ಗೆ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಅಲಂಕಾರ, ಅಭಿಷೇಕ ಹಾಗೂ ಪ್ರಸಾದ ಸೇವೆ ನೆರವೇರಿತು.
ಸಂಜೆ ವೇಳೆ, ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟದ ಆಶ್ರಯದಲ್ಲಿ ನಂಜನಗೂಡಿನ ಹಿರಿಯ ಕಲಾವಿದ ವಿದುಷಿ ಶ್ರೀಮತಿ ರಮ್ಯಾ ರಾಘವೇಂದ್ರ ಮತ್ತು ತಂಡದವರು ಭರತನಾಟ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಸುಮಾರು 1 ಗಂಟೆ 30 ನಿಮಿಷಗಳ ಕಾಲ ನಿರಂತರವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತ ಕೃತಿಗಳಿಗೆ ಭಕ್ತಿಭಾವದಿಂದ ನೃತ್ಯಮಾಡಿ ಭಕ್ತರನ್ನು ಕರೆದೊಯ್ದರು. ಸುಮಾರು 350ಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮವನ್ನು ಕಣ್ಣು ತುಂಬಿಕೊಂಡು ಆನಂದಿಸಿದರು.

ಕಾರ್ಯಕ್ರಮದ ವೇಳೆ ವಿದುಷಿ ರಮ್ಯಾ ರಾಘವೇಂದ್ರ ಮತ್ತು ತಂಡದ ಸದಸ್ಯರಿಗೆ ‘ಶ್ರೀ ರಾಘವೇಂದ್ರ ಪುರಸ್ಕಾರ’ ಪ್ರದಾನ ಮಾಡುವ ಮೂಲಕ ಸನ್ಮಾನಿಸಲಾಯಿತು. ನಂತರ ಮಹಾಮಂಗಳಾರತಿ ಮತ್ತು 1008 ಬಾರಿ ಶ್ರೀ ರಾಘವೇಂದ್ರ ನಾಮಲೇಖನ ಮಾಡಲು ಬಳಸುವ ಪುಸ್ತಕ ವಿತರಣೆಯೂ ಜರುಗಿತು. ಪ್ರಸಾದ ವಿನಿಯೋಗದೊಂದಿಗೆ ಸಂಜೆ ಸೇವೆಯು ಉಜ್ವಲವಾಗಿ ಕಳಿಯಿತು.
ಈ ಸಂಧರ್ಭದಲ್ಲಿ ಶ್ರೀ ಮಂಜುನಾಥ ಪುರಿಬಟಿ ಕುಟುಂಬ, ಕಾಳೇನಹಳ್ಳಿಯ ಆನಂದ್, ರಂಗಮಂದಿರದ ಮುಖ್ಯಸ್ಥ ಪ್ರಕಾಶ್, ಒಕ್ಕೂಟದ ಸಂಚಾಲಕಿ ವಿದುಷಿ ಡಾ. ಸ್ವಾತಿ ಪಿ ಭಾರದ್ವಾಜ್, ಅರುಣ್, ಸಣ್ಣಪ್ಪ, ಮೋನಿಷ, ಹಿತನ್ಯ, ವಿಭಾ, ಗುರುಪ್ರಸಾದ್ ಮತ್ತು ಅರ್ಚಕರಾದ ವಾಸು, ರಾಮಪ್ರಸಾದ್, ಜೀವನ ಹಾಗೂ ಹಲವಾರು ಗಣ್ಯರು ಹಾಜರಿದ್ದರು.
– ಮಂಜುನಾಥ್ ಐ.ಕೆ
