ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಗನ್ನಿ ಅಗ್ರಹಾರ ಗ್ರಾಮದಲ್ಲಿ ಪಡುವನಹಳ್ಳಿ ಕ್ಲಸ್ಟರ್ ವತಿಯಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಶಿಕ್ಷಣ ಇಲಾಖೆಯ ಇಸಿ ಓ ಶಿವಾನಂದ್ ಹಾಗೂ ಸಿಆರ್ಪಿ ಸಂಗೀತ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಮೆಚ್ಚಿದರು.
ಕಾರ್ಯಕ್ರಮದ ಅಂಗವಾಗಿ ವಿನಾಯಕ ಗೆಳೆಯರ ಬಳಗದವರು ಗನ್ನಿ ಅಗ್ರಹಾರ ಸರ್ಕಾರಿ ಶಾಲೆಗೆ ಗಡಿಯಾರ ಮತ್ತು ಚೇರುಗಳನ್ನು ವಿತರಿಸಿದರು. ಅಲ್ಲದೇ ಅಂಗನವಾಡಿ ಕೇಂದ್ರಕ್ಕೆ ಕುಳಿತುಕೊಳ್ಳುವ ಚೇರ್, ತಟ್ಟೆ, ಲೋಟ ಸೇರಿದಂತೆ ಅಗತ್ಯ ವಸ್ತುಗಳನ್ನು ಉಚಿತವಾಗಿ ನೀಡಿ ಸಮಾಜ ಸೇವೆಯ ನಿದರ್ಶನ ತೋರಿದರು. ಸಾರ್ವಜನಿಕರ ಸೌಕರ್ಯಕ್ಕಾಗಿ ಶಾಮಿಯಾನ, ಮೈಕ್ ವ್ಯವಸ್ಥೆ ಮತ್ತು ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಹ ವಿನಾಯಕ ಗೆಳೆಯರ ಬಳಗವೇ ಮಾಡಿತ್ತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಭಾರತಿ ಮಲ್ಲೇಶ್, ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ರಮ್ಯಾ ನಾಗಶೆಟ್ಟಿ, ಕುಂಬೆನಹಳ್ಳಿ ಮತ್ತು ಅಗ್ರಹಾರ ಗ್ರಾ.ಪಂ ಸದಸ್ಯೆ ಶ್ರೀಮತಿ ಮೀನಾಕ್ಷಿ ಯೋಗೇಶ್, ಕಾಚೇನಹಳ್ಳಿ ಪಿಸಿಐಎಸ್ ಅಧ್ಯಕ್ಷ ಎ.ಎಂ. ಪ್ರಭಾಕರ್, ಸೊಸೈಟಿ ನಿರ್ದೇಶಕ ಜಗದೀಶ್, ಗುತ್ತಿಗೆದಾರ ಬಾಬು, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸೋಮನಾಥ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

ಗನ್ನಿ ಅಗ್ರಹಾರ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಸಿದ್ದರಾಜು, ಸಹ ಶಿಕ್ಷಕಿ ಲಕ್ಷ್ಮಿ ಹಾಗೂ ವಿನಾಯಕ ಗೆಳೆಯರ ಬಳಗದ ಭರತ್, ಮಂಜೇಗೌಡ, ಸತೀಶ್, ವಿನಯ್, ಶರತ್, ಚೇತನ್, ಗಿರೀಶ್, ಸಂದೀಪ್, ಮಂಜುನಾಥ್, ಮೋಹನ್, ಕುಮಾರ್, ಅಭಿ ಸೇರಿದಂತೆ ಅನೇಕರು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.

ಗ್ರಾಮೀಣ ಮಕ್ಕಳ ಪ್ರತಿಭೆ ಮಿಂಚಿದ ಈ ಕಾರ್ಯಕ್ರಮ ಗ್ರಾಮದಲ್ಲಿ ಶಿಕ್ಷಣ ಪ್ರೋತ್ಸಾಹ, ಸಾಮಾಜಿಕ ಹೊಣೆಗಾರಿಕೆ ಮತ್ತು ಸಮಗ್ರ ಅಭಿವೃದ್ಧಿಗೆ ಹೊಸ ಉತ್ಸಾಹವನ್ನು ತುಂಬಿತು.
– ಮಂಜುನಾಥ್ ಐ ಕೆ
