ಚನ್ನರಾಯಪಟ್ಟಣ: ತಾಲೂಕು ದಂಡಾಧಿಕಾರಿಗಳ ವಿರುದ್ಧ ಆರೋಪವು ಆಧಾರ ರಹಿತವಾಗಿದೆ ಎಂದು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್ ಎಂ ಲಕ್ಷ್ಮಣ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಕೆಲವು ಪ್ರಗತಿಪರ ಸಂಘಟನೆಗಳ ಮುಖಂಡರು, ತಾಲೂಕು ಆಡಳಿತ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಹಾಗೂ ಸಾರ್ವಜನಿಕರ ಕೆಲಸಗಳನ್ನು ಮಾಡಲು ತಾಲೂಕು ಕಚೇರಿಯ ನೌಕರರಿಗೆ ಅವಕಾಶ ನೀಡದೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಂದಾಯ ಇಲಾಖೆಗೆ ಸಂಬಂಧಪಟ್ಟ ಕಂದಾಯ ಮಂತ್ರಿ , ಹಾಸನ ಜಿಲ್ಲಾ ಮಂತ್ರಿ, ಸಂಸದರು, ಶಾಸಕರು, ಮತ್ತು ಜಿಲ್ಲಾಧಿಕಾರಿಯ ಕಚೇರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ನಂತರವೂ ಕೆಲವು ವ್ಯಕ್ತಿಗಳ ವೈಯುಕ್ತಿಕ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದರು.
ತಾಲೂಕು ದಂಡಾಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಇವರು ತಾಲೂಕು ದಂಡಾಧಿಕಾರಿಗಳು ಭ್ರಷ್ಟಾಚಾರ ಮಾಡಿರುವ ಯಾವುದೇ ದಾಖಲಾತಿ ಇದ್ದರೆ ಸರ್ಕಾರಕ್ಕೆ ಹಾಗೂ ಲೋಕಾಯುಕ್ತಕ್ಕೆ ನೀಡಿ ಸೂಕ್ತ ತನಿಖೆ ಮಾಡುವಂತೆ ಮನವಿ ಸಲ್ಲಿಸಲಿ, ಅದನ್ನು ಬಿಟ್ಟು ಪ್ರತಿದಿನ ಪ್ರತಿಭಟನೆ ಹೆಸರಿನಲ್ಲಿ ಧ್ವನಿವರ್ಧಕಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದರು.
ದಲಿತ ಮುಖಂಡ ಸಿ ಎನ್ ಮಂಜುನಾಥ್ ಮಾತನಾಡಿ, ರಾಮನಗರದಲ್ಲಿ ಮಾತನಾಡಿರುವ ಆಡಿಯೋವನ್ನು ಇಲ್ಲಿ ತಳಕು ಹಾಕುವುದು ಸರಿಯಲ್ಲ, ತಾಲೂಕು ದಂಡಾಧಿಕಾರಿಗಳಿಗೆ ಲಂಚ ಕೊಟ್ಟಿರುವ ವಿಡಿಯೋ ಇದ್ದರೆ ಅದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಗುಲಸಿಂದ ಮಹೇಶ್ ಎಂಬ ವ್ಯಕ್ತಿಯ ವೈಯಕ್ತಿಕ ಹಿತಾಸಕ್ತಿಯ ಕೋರಿಕೆ ಮೇಲೆ ಧರಣಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಇದೇ ಸಂದರ್ಭದಲ್ಲಿ ದಲಿತ ಮುಖಂಡರಾದ ದಂಡೋರ ಮಂಜುನಾಥ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರವಣಬೆಳಗೊಳ ಲಕ್ಷ್ಮಣ್, ನೇರಳಕೆರೆ ವಿಶ್ವನಾಥ್, ರಾಮು ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ.
