ಚನ್ನರಾಯಪಟ್ಟಣ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮವೇ ಪ್ರಮುಖ ಕಾರಣವಾಗಿದ್ದು, ಕೇವಲ ಗ್ಯಾರೆಂಟಿ ಯೋಜನೆಗಳ ಆಧಾರದ ಮೇಲೆ ಪಕ್ಷ ಬಲವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮಾಜಿ ಶಾಸಕರಾದ ಸಿ ಎಸ್ ಪುಟ್ಟೇಗೌಡ ನಿವಾಸದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದ್ದು, ಕೆಲವರನ್ನಷ್ಟೇ ರಾಜ್ಯ ನಾಯಕರು ಪರಿಗಣಿಸುತ್ತಿರುವುದು ಬೇಸರ ತಂದಿದೆ. ಪಕ್ಷದ ನೆಲಮಟ್ಟದಲ್ಲಿ ದುಡಿಯುತ್ತಿರುವ ಕಾರ್ಯಕರ್ತರ ಭವಿಷ್ಯ ಏನು ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಹೇಳಿದರು.

ಸಚಿವರ ನಿವಾಸಗಳಿಗೆ ಕಾರ್ಯಕರ್ತರು ತೆರಳಿದಾಗ ಅವರನ್ನು ಭೇಟಿಯಾಗಲು ಸಹ ಅವಕಾಶ ದೊರೆಯದೆ, ಏಜೆಂಟ್ಗಳ ಮೂಲಕವೇ ಕೆಲಸಗಳನ್ನು ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆ – ಇಲ್ಲದಿರುವುದು ಸಂಘಟನೆಗೆ ಧಕ್ಕೆಯಾಗುತ್ತಿದೆ ಎಂದು ದೂರಿದರು. ಸಂಸದ ಶ್ರೇಯಸ್ ಪಟೇಲ್ ಅವರು ಕಾರ್ಯಕರ್ತರ ಸಹಕಾರದಿಂದ ಗೆಲುವು ಸಾಧಿಸಿದ್ದರೂ, ನಂತರ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿಲ್ಲ ಎಂದು ಸಭೆಯಲ್ಲಿ ಮುಖಂಡರು ಆರೋಪಿಸಿದರು.
ಕಾರ್ಯಕ್ರಮಗಳಿಗೆ ಆಗಮಿಸಿ ಸಾರ್ವಜನಿಕ ಸ್ವಾಗತ ಸ್ವೀಕರಿಸುವುದಷ್ಟೇ ನಡೆಯುತ್ತಿದ್ದು, ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸುವ ಮನೋಭಾವ ಕಾಣಿಸುತ್ತಿಲ್ಲ ಎಂದರು.ಪಕ್ಷ ಸಂಘಟನೆಗಾಗಿ ತನು-ಮನ-ಧನವನ್ನೇ ಅರ್ಪಿಸಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಸ್ಥಳೀಯ ಮುಖಂಡರು ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಡೆಗಣಿಸಲಾಗುತ್ತಿರುವುದು ಬೇಸರ ತಂದಿದೆ. ಮುಂದಿನ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮ ದಾರಿ ನಮಗೆ ಎನ್ನುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಗ್ರಾನೆಟ್ ರಾಜಶೇಖರ್ ಎಚ್ಚರಿಸಿದರು.
ಎಚ್ಎಸ್ ವಿಜಯಕುಮಾರ್ ಮಾತನಾಡಿ ತಾವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಸಂಘಟನೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದರೂ, ಪಕ್ಷದಲ್ಲಿ ದುಡಿಯುವವರಿಗೆ ಯಾವುದೇ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳಾದರೂ ಪಕ್ಷ ಸಂಘಟನೆಗೆ ದುಡಿಯುತ್ತಿರುವ ಕಾರ್ಯಕರ್ತರಿಗೆ ಸೂಕ್ತ ಗೌರವ ಸಿಕ್ಕಿಲ್ಲ. ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಸಂಸದರು ಕೇವಲ ಪರಾಜಿತ ಅಭ್ಯರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಮಾತನಾಡಿದ್ದಾರೆ.ಪಕ್ಷದ ಗೆಲುವು ಕೇವಲ ಗ್ಯಾರೆಂಟಿ ಯೋಜನೆಗಳ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಪ್ರತಿಪಕ್ಷ ಇನ್ನೂ ಬಲಿಷ್ಠವಾಗಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು ಅಗತ್ಯವಾಗಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಜಿಲ್ಲೆಯ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರು ಸರ್ಕಾರದ ಕೆಲಸಗಳನ್ನು ಕಾನೂನು ಪ್ರಕಾರ ನಿರ್ವಹಿಸುವುದಾಗಿ ತಿಳಿಸಿದ್ದರೂ, ಕಾರ್ಯಕರ್ತರ ಸಮಸ್ಯೆಗಳನ್ನು ಯಾರಿಗೆ ತಿಳಿಸಬೇಕು ಎಂಬ ಗೊಂದಲ ಉಂಟಾಗಿದೆ ಎಂದು ಹೇಳಿದರು.ಪಕ್ಷದ ವರಿಷ್ಠರು ತಕ್ಷಣವೇ ಜಿಲ್ಲೆಯ ಮುಖಂಡರೊಂದಿಗೆ ಸಭೆ ನಡೆಸಿ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಬೇಕು. ಕಾರ್ಯಕರ್ತರ ನಿರ್ಲಕ್ಷ್ಯ ಮುಂದುವರೆದರೆ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಮುಖಂಡರು ಎಚ್ಚರಿಸಿದರು.
ರಾಜ್ಯ ನಾಯಕರನ್ನು ಭೇಟಿಯಾಗಿ ಸಮಸ್ಯೆಗಳ ಕುರಿತು ನೇರವಾಗಿ ಚರ್ಚಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಮಾಜಿ ಎಂಎಲ್ಎ ಪುಟ್ಟೇಗೌಡ, ಕೆಪಿಸಿ ಪ್ರಧಾನ ಕಾರ್ಯದರ್ಶಿ ಜಾವಗಲ್ ಮಂಜುನಾಥ್, ಹಾಸನ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಚ್ಎಸ್ ವಿಜಯಕುಮಾರ್, ಕೃಷ್ಣೆಗೌಡ ರಾಜಶೇಖರ್, ಮೆಟ್ರೋ ಬಾಬು, ಬೇಲೂರು ಕೃಷ್ಣೇಗೌಡ, ಎಚ್ ಕೆ ಮಹೇಶ್, ಬಾಗೂರು ಮಂಜೇಗೌಡ, ಡಿಸಿ ಸಣ್ಣಸ್ವಾಮಿ, ಅರಕಲಗೂಡು ಪ್ರಸನ್ನ ಕುಮಾರ್, ಅಬ್ದುಲ್ ಆದಿ, ಅಬ್ದುಲ್ ಸಮದ್, ಹಾನ್ ಬಾಳ್ ಭಾಸ್ಕರ್, ಸೇರಿದಂತೆ ವಿವಿಧ ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್
