ಚನ್ನರಾಯಪಟ್ಟಣ: ಶ್ರೀನಿವಾಸಪುರ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ಜೂನ್ ಮಾಸದಲ್ಲಿ, ಕಬ್ಬು ಅರಿಯುವ ಕಾರ್ಯವನ್ನ ಆರಂಭ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜಣ್ಣ ಆಗ್ರಹ ಮಾಡಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಈ ಸಂಬಂಧ ಮಾತನಾಡಿ ಜೂನ್ ಮಾಸದಲ್ಲಿ ರೈತರು ಬೆಳೆದ ಕಬ್ಬಿಗೆ 12 ತಿಂಗಳಾಗುತ್ತಿದ್ದು, ಕಟಾವಿಗೆ ಬಂದಿದೆ. ಕಾರ್ಖಾನೆ ಕಬ್ಬನ್ನು ಕಟಾವು ಮಾಡಿ ಪಡೆಯಬೇಕು, ಈ ಕಾರ್ಯ ವಿಳಂಬವಾದರೆ ರೈತರಿಗೆ ಆರ್ಥಿಕ ನಷ್ಟವಾಗುತ್ತದೆ. ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ 24- 25 ನೇ ಸಾಲಿನಲ್ಲಿ, ಆಗಸ್ಟ್ ಒಂದರಂದು ಕಬ್ಬನ್ನು ಅರೆಯುವ ಕಾರ್ಯ ಆರಂಭಿಸಿ, ಫೆಬ್ರವರಿ ಮಾಸದವರಿಗೆ ಕಬ್ಬನ್ನು ಅರೆದಿತ್ತು. ರೈತರು ಮೇ ತಿಂಗಳಿಂದ ಆಗಸ್ಟ್ ತಿಂಗಳವರೆಗೆ ಕಬ್ಬು ನಾಟಿ ಮಾಡುವ ಕ್ರಮವಿದೆ.
ಕಾರ್ಖಾನೆ ಕಬ್ಬು ಅರಿಯುವುದನ್ನು ತಡ ಮಾಡಿದಾಗ ರೈತರಿಗೆ ನಷ್ಟ ಉಂಟಾಗುತ್ತದೆ, ಸೆಪ್ಟೆಂಬರ್ ನಂತರ ಕಟಾವು ಕಾರ್ಮಿಕರು ತಮ್ಮ ಉತ್ತರ ಕರ್ನಾಟಕ ಮಹಾರಾಷ್ಟ್ರ ಭಾಗಕ್ಕೆ ವಾಪಸ್ಸು ಹೋಗುವ ಕಾರಣ. ಕಟಾವು ಮಾಡಲು ಕಾರ್ಮಿಕರೆ ಕೊರತೆಯಾಗುತ್ತದೆ, ರೈತರು ಕಟಾವಿಗೆ ಅಧಿಕ ಹಣವನ್ನು ನೀಡಬೇಕಾದ ಪರಿಸ್ಥಿತಿ ಒದಗುತ್ತದೆ. ಈ ಭಾಗದಲ್ಲಿ ಕಬ್ಬು ಬೆಳೆ ಚೆನ್ನಾಗಿ ಬಂದಿದ್ದು ಕಬ್ಬನ್ನು ಶೀಘ್ರವಾಗಿ ಕಟಾವು ಮಾಡಬೇಕು. ಕಾರ್ಖಾನೆ ಈ ಬಗ್ಗೆ ಗಮನಹರಿಸದಿದ್ದರೆ ರೈತರಿಗೆ ಆಗುವ ನಷ್ಟವನ್ನು ಕಾರ್ಖಾನೆಗೆ ತುಂಬಿಕೊಡಬೇಕು ಇದು ರೈತರ ಆಗ್ರಹವಾಗಿದೆ.
ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಆ ಸಕ್ಕರೆ ನಿರ್ದೇಶಕರು ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ ಎಂದರು. ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ರೈತರಿಗೆ 25 ಕೆಜಿ ಸಕ್ಕರೆಯನ್ನು ಬೋನಸ್ ಆಗಿ ನೀಡುತ್ತಿದ್ದು, ಈ ಬಾರಿ ಚುನಾವಣೆಯ ನೆಪವಡ್ಡಿ ನೀಡಿಲ್ಲ. ಇದು ರೈತರಿಗೆ ಮಾಡಿದ ಅನ್ಯಾಯವಾಗಿದೆ. ಆಡಳಿತ ಮಂಡಳಿ ವಿರೋಧ ಪಕ್ಷದವರು ಹಾಗೂ ಶಾಸಕರು ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಮಾಡಿದ ಅವರು ಪೊಲೀಸ್ ಇಲಾಖೆಗೆ ವಾಹನ ನೀಡಲು ಕಾನೂನು ಅಡ್ಡಿ ಬರಲಿಲ್ಲವೇ ಎಂದು ಪ್ರಶ್ನಿಸಿ, ರೈತ ಸಂಘಕ್ಕು ಒಂದು ವ್ಯಾನು ನೀಡಿ, ಸಾರ್ವಜನಿಕರ ಉಪಯೋಗಕ್ಕೆ ಆಂಬುಲೆನ್ಸ್ ನೀಡಿ, ರೈತರ ಉಪಯೋಗಕ್ಕಾಗಿ ಹೇಮಾವತಿ ಸಕ್ಕರೆ ಕಾರ್ಖಾನೆಯ ಮುಂದೆಯೇ ಅದನ್ನು ನಿಲ್ಲಿಸಿ ಎಂಬ ಬೇಡಿಕೆ ಇಟ್ಟರು. ಕಾರ್ಖಾನೆ ರೈತರನ್ನು ಉಳಿಸಬೇಕು ರೈತರ ಆರ್ಥಿಕ ಸಂಕಷ್ಟವನ್ನು ಅರಿತು ಕಾರ್ಖಾನೆ ಆರಂಭಿಸಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ರಂಗಸ್ವಾಮಿ, ರಾಜ್ಯ ರೈತ ಸಂಘದ ಮಹಿಳಾ ಅಧ್ಯಕ್ಷ ನಾಗರತ್ನಮ್ಮ, ವಿಜಯ್ ಕುಮಾರ್, ಮಂಜಣ್ಣ, ಗುರುರಾಜ್, ಶಿವಣ್ಣ ಹೇಳಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ .ಕೆ
