ಚನ್ನರಾಯಪಟ್ಟಣ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ರೈತ ಮುಖಂಡ ಸಿ.ಜಿ. ರವಿ ಅವರು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಸಂಘದ ಮುಖಂಡರು ಆಗ್ರಹಿಸಿದರು.
ರವಿ ಅವರಿಗೆ 24 ಗಂಟೆಗಳ ಗಡುವು ನೀಡಲಾಗಿದ್ದು, ರೈತ ಸಂಘ ಮತ್ತು ದಲಿತ ಸಂಘಗಳ ಮುಖಂಡರು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಮಾಡಿರುವ ಆರೋಪವನ್ನು ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಕೆಳಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಈ ವಿಷಯ ಕುರಿತು ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಬೇಕೆಂದು ಕೂಡ ತಿಳಿಸಿದರು. ಈ ಎರಡು ಷರತ್ತುಗಳನ್ನು ಪಾಲಿಸದಿದ್ದಲ್ಲಿ ಚನ್ನರಾಯಪಟ್ಟಣ ಮಿನಿ ವಿಧಾನಸೌಧದ ಮುಂಭಾಗದಿಂದ ಸಿ.ಜಿ. ರವಿ ಅವರ ಮನೆವರೆಗೂ ಕಾಲ್ನಡಿಗೆಯಲ್ಲಿ ಪಾದಯಾತ್ರೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷೆ ಚಿನ್ನೇನಹಳ್ಳಿ ನಾಗರತ್ನಮ್ಮ, ರಾಜ್ಯ ಕಾರ್ಯದರ್ಶಿ ಅರಸೀಕೆರೆ ರವೀಶ್, ಜಿಲ್ಲಾ ಮುಖಂಡ ಸೊಪ್ಪನಹಳ್ಳಿ ಶಿವಣ್ಣ ಹಾಗೂ ತಾಲೂಕು ಅಧ್ಯಕ್ಷ ಮಡಬ ಮಂಜು ಹಾಜರಿದ್ದರು.
– ಮಂಜುನಾಥ್ ಐ.ಕೆ
