ಚನ್ನರಾಯಪಟ್ಟಣ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ವತಿಯಿಂದ ಹಿರೀಸಾವೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ, ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷರಾದ ಭರತ್ ಕುಮಾರ್ ಹೆಚ್.ಜಿ ಅವರು ವೇದಿಕೆಯ ಗಣ್ಯರೊಂದಿಗೆ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೀಸಾವೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮಣಗೌಡ ಬಿ.ಹೆಚ್ ವಹಿಸಿದ್ದರು.
ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಭರತ್ ಕುಮಾರ್ ಹೆಚ್.ಜಿ ಅವರು, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು. ಅತಿವೇಗ, ಅಜಾಗರೂಕತೆ, ಮದ್ಯಪಾನ ಮಾಡಿ ವಾಹನ ಚಾಲನೆ, ಮೊಬೈಲ್ ಬಳಕೆ ಸೇರಿದಂತೆ ಹಲವಾರು ಕಾರಣಗಳಿಂದ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಪಡೆದು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು. ಉತ್ತಮ ಶಿಕ್ಷಣದ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ ಎಂದು ಹೇಳಿದರು. ಇದೇ ವೇಳೆ ರಕ್ತದಾನದ ಮಹತ್ವ ಹಾಗೂ ಅದರ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚರಣ್ ಗೌಡ ಅವರು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಕಾನೂನು ಅರಿವು ಕುರಿತು ಉಪನ್ಯಾಸ ನೀಡಿದರು. ಯಾವ ವಯಸ್ಸಿನಲ್ಲಿ ವಾಹನ ಚಾಲನೆ ಮಾಡಬೇಕು, ವಾಹನ ಚಾಲನೆ ಮಾಡುವಾಗ ಹೊಂದಿರಬೇಕಾದ ದಾಖಲೆಗಳು, ವಾಹನ ವಿಮೆ ಹಾಗೂ ನೋಂದಣಿ ಸೇರಿದಂತೆ ಹಲವು ಮಾಹಿತಿಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದು, ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು, ಅತಿವೇಗದಲ್ಲಿ ವಾಹನ ಓಡಿಸುವುದು ಹಾಗೂ ವೀಲಿಂಗ್ ಮಾಡುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ತಿಳಿಸಿ, ಇವುಗಳಿಗೆ ಕಾನೂನಿನಡಿ ವಿಧಿಸುವ ಶಿಕ್ಷೆಗಳ ಬಗ್ಗೆ ವಿವರಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿಗಳಾದ ಕಿಶೋರ್ ಕುಮಾರ್ ಸಿ.ಎಸ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ತಾಳ್ಮೆ ಕಡಿಮೆಯಾಗಿದ್ದು, ವೇಗದ ಜೀವನಶೈಲಿ ಹೆಚ್ಚಾಗಿದೆ. ಮೊಬೈಲ್ ಬಳಕೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ಗಮನ ಹರಿಸದೆ ವಾಹನ ಚಾಲನೆ ಮಾಡುತ್ತಾರೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಲಕ್ಷ್ಮಣಗೌಡ ಬಿ.ಹೆಚ್ ಅವರು ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನೋಬೆಲ್ ಪ್ರಶಸ್ತಿ ಪಡೆದಿರುವ ಏಕೈಕ ಸೇವಾ ಸಂಸ್ಥೆಯಾಗಿದ್ದು, ಸಮಾಜ ಸೇವೆಯಲ್ಲಿ ಮಹತ್ತರ ಪಾತ್ರವಹಿಸಿದೆ. ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ, ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವುದು ಹಾಗೂ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ ಎಂದರು. ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಕಾರ್ಯದರ್ಶಿ ಜಬಿವುಲ್ಲಾ ಬೇಗ್ ಸಿ.ಎನ್ ಅವರು ಮಾತನಾಡಿ, ಶಿಬಿರದಲ್ಲಿ ಸುಮಾರು 130ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಿ.ಕೃ. ಚಂದ್ರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಉದಯ್ ಶಂಕರ್, ಕಾಲೇಜು ರೆಡ್ ಕ್ರಾಸ್ ಸಂಚಾಲಕ ಹರೀಶ್ ಹೆಚ್.ಜೆ, ಸಹ ಪ್ರಾಧ್ಯಾಪಕ ಡಾ. ಮಂಜುನಾಥ್ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
