ಚನ್ನರಾಯಪಟ್ಟಣ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲ್ಲೂಕು ಘಟಕ ಹಾಗೂ ವಕೀಲರ ಸಂಘ ಚನ್ನರಾಯಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಕೋರ್ಟ್ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ಶಿಬಿರದಲ್ಲಿ ಮಹಿಳಾ ವಕೀಲರು, ಅವರ ಕುಟುಂಬದವರು ಹಾಗೂ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಲಯನ್ಸ್ ಕ್ಲಬ್ ಹಾಗೂ ನ್ಯೂ ಸ್ಪರ್ಶ ಹಾಸ್ಪಿಟಲ್ ಸಹಯೋಗದೊಂದಿಗೆ ನಡೆದ ಈ ಶಿಬಿರದಲ್ಲಿ ಸುಮಾರು 203ಕ್ಕೂ ಹೆಚ್ಚು ಮಂದಿಗೆ ಬಿ.ಪಿ., ಶುಗರ್, ಕಣ್ಣಿನ ತಪಾಸಣೆ, ಮೂಳೆ ಮತ್ತು ಕೀಲು ತಪಾಸಣೆ, ಪ್ರಸೂತಿ ಹಾಗೂ ಸ್ತ್ರೀರೋಗ ತಪಾಸಣೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ ವೈದ್ಯಕೀಯ ಸೇವೆಗಳನ್ನು ಒದಗಿಸಲಾಯಿತು.
ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಭರತ್ ಕುಮಾರ್ ಹೆಚ್.ಜಿ. ಅವರು ಮಾತನಾಡಿ, ಮಹಿಳೆಯರ ಆರೋಗ್ಯ ಜಾಗೃತಿ ಮತ್ತು ಮುನ್ನೆಚ್ಚರಿಕಾ ತಪಾಸಣೆ ಅತ್ಯಂತ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಹರೀಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಚನ್ನರಾಯಪಟ್ಟಣದ ಅಧ್ಯಕ್ಷ ಗಿರೀಶ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಜಬಿವುಲ್ಲಾ ಬೇಗ್, ನಿರ್ದೇಶಕ ವಿಜಯ್ ಬಿ.ವಿ., ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಮಂಜುನಾಥ್, ನ್ಯೂ ಸ್ಪರ್ಶ ಹಾಸ್ಪಿಟಲ್ನ ಮೋಹನ್, ಆಸ್ಪತ್ರೆ ಸಿಬ್ಬಂದಿ, ವಕೀಲ ಚೇತನ್ ಹಾಗೂ ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.
– ಐ.ಕೆ.ಮಂಜುನಾಥ್
