ಚನ್ನರಾಯಪಟ್ಟಣ: ಗ್ರಾಮೀಣ ಕ್ರೀಡೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಖೇಲೋ ಇಂಡಿಯಾ ಯೋಜನೆಯ ಮೂಲಕ ದೇಶೀಯ ಕ್ರೀಡೆಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ 38ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಎರಡು ದಿನಗಳ ಡಾ. ಸೂರಜ್ ರೇವಣ್ಣ 5.0 ಕಬ್ಬಡಿ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ಭಾರತ ಒಲಂಪಿಕ್ಸ್ ಆತಿಥ್ಯ ವಹಿಸುವ ಹಿನ್ನಲೆಯಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಉದ್ದೇಶದಿಂದ ಕೇಂದ್ರ ಸರ್ಕಾರ ಕ್ರೀಡೆಗಳಿಗೆ ಮಹತ್ವ ನೀಡುತ್ತಿದೆ ಎಂದರು. ವಿಶೇಷವಾಗಿ ಗ್ರಾಮೀಣ ಕ್ರೀಡೆಗಳಾದ ಕಬ್ಬಡಿ, ಖೋ–ಖೋಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಬ್ಬಡಿ ಇಂದು ಪ್ರೋ–ಕಬ್ಬಡಿ ಲೀಗ್ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದು, ಪುರುಷ ಮತ್ತು ಮಹಿಳಾ ಕಬ್ಬಡಿ ತಂಡಗಳು ವಿಶ್ವ ಚಾಂಪಿಯನ್ ಆಗಿರುವುದು ದೇಶಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದರು. ಬದುಕು ಕೂಡ ಕಬ್ಬಡಿ ಆಟದಂತೆ ಸವಾಲುಗಳಿಂದ ಕೂಡಿದ್ದು, ಸೋಲಿನಿಂದ ಕುಗ್ಗದೇ ಮರು ಗೆಲುವಿಗೆ ಶ್ರಮಿಸುವ ಮನೋಭಾವ ಇರಬೇಕು ಎಂದು ಯುವಕರಿಗೆ ಕರೆ ನೀಡಿದರು. ಯುವಕರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು, ಧೂಮಪಾನ ಮತ್ತು ಮದ್ಯಪಾನದ ದುಷ್ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದರು.
ಇದನ್ನು ಓದಿ:Watch Video- ಚನ್ನರಾಯಪಟ್ಟಣ: ಲೋಕ ಕಲ್ಯಾಣಾರ್ಥವಾಗಿ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ಮಹಾ ಚಂಡಿಕಾ ಯಾಗ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್ ಮಾತನಾಡಿ, ಗ್ರಾಮೀಣ ಕ್ರೀಡೆಗಳಾದ ಕಬ್ಬಡಿ ಇಂದು ರಾಷ್ಟ್ರಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ವಿಷಯ. ಪ್ರತಿವರ್ಷ ರಾಜ್ಯಮಟ್ಟದ ಕಬ್ಬಡಿ ಟೂರ್ನಮೆಂಟ್ ಆಯೋಜಿಸುತ್ತಿರುವ ಡಾ. ಸೂರಜ್ ರೇವಣ್ಣ ಅವರ ಕ್ರೀಡಾಪ್ರೇಮ ಶ್ಲಾಘನೀಯ ಎಂದು ಹೇಳಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆ, ಕಲೆ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸುವ ಉದ್ದೇಶದಿಂದ ಡಾ. ಸೂರಜ್ ರೇವಣ್ಣ ಕಬ್ಬಡಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದರು. ತಾಲ್ಲೂಕಿನ ಕ್ರೀಡಾಪಟುಗಳ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ರಾಷ್ಟ್ರಮಟ್ಟದ ಕಬ್ಬಡಿ ಆಟಗಾರರು ಹಾಗೂ ಪ್ರೋ–ಕಬ್ಬಡಿಯನ್ನು ಪ್ರೋತ್ಸಾಹಿಸಿದ ಗಣ್ಯರನ್ನು ಅಭಿನಂದಿಸಲಾಯಿತು. ಪಂದ್ಯಾವಳಿಯಲ್ಲಿ ಮೈಸೂರು ಕುಂಬಾರಕೊಪ್ಪಲು ಕಬ್ಬಡಿ ತಂಡ ಡಾ. ಸೂರಜ್ ರೇವಣ್ಣ ಕಪ್ ಹಾಗೂ ₹90,000 ನಗದು ಬಹುಮಾನ ಪಡೆದು ಪ್ರಥಮ ಸ್ಥಾನ ಗಳಿಸಿತು. ರನ್ನರ್ಅಪ್ ಆಗಿ ಕೆ.ಆರ್.ಪೇಟೆ ತಾಲ್ಲೂಕಿನ ಬೋರಮಾರನಹಳ್ಳಿ ತಂಡ ₹50,000 ನಗದು ಮತ್ತು ಕಪ್ ಪಡೆದು, ತೃತೀಯ ಸ್ಥಾನವನ್ನು ಜೆಕೆಎಂ ಬುಲ್ಸ್ ತಂಡ ₹30,000 ನಗದು ಹಾಗೂ ಕಪ್ ಪಡೆದಿತು. ಕುಂಬಾರಕೊಪ್ಪಲು ತಂಡದ ಆಟಗಾರ ಧರ್ಮ ಅವರು ಬೆಸ್ಟ್ ರೈಡರ್ ಪ್ರಶಸ್ತಿ ಪಡೆದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರು, ಶಾಸಕರು, ಮಾಜಿ ಶಾಸಕರು, ಕ್ರೀಡಾಪಟುಗಳು ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.

[…] ಇದನ್ನು ಓದಿ: ಚನ್ನರಾಯಪಟ್ಟಣ: ಗ್ರಾಮೀಣ ಕ್ರೀಡೆಗಳಿಗೆ ಕೇ… […]