ಚನ್ನರಾಯಪಟ್ಟಣ: ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪಂಪ್ಹೌಸ್ ಆವರಣದಲ್ಲಿ ಸೋಮವಾರದಂದು ಪುರಸಭೆ ವ್ಯಾಪ್ತಿಯಲ್ಲಿನ ೧೫ನೇ ಹಣಕಾಸು ಮತ್ತು ನಗರೋತ್ಥಾನ ಯೋಜನೆಯಡಿ ೧ಕೋಟಿ ೯ ಲಕ್ಷ ರೂ. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪಂಪ್ಹೌಸ್ ಆವರಣದಲ್ಲಿರುವ ಪೌರಕಾರ್ಮಿಕರ ಹಾಲಿ ಕಟ್ಟಡವು ಶಿಥಿಲಗೊಂಡ ಹಿನ್ನೆಲೆಯಲ್ಲಿ ನಗರೋತ್ಥಾನ ಯೋಜನೆಯಡಿ ೩೦ ಲಕ್ಷ ವೆಚ್ಚದಲ್ಲಿ ಪೌರಕಾರ್ಮಿಕರ ವಿಶ್ರಾಂತಿ ಗೃಹವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಪುರುಷರು ಮತ್ತು ಮಹಿಳಾ ಪೌರಕಾರ್ಮಿಕರಿಗೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು ಇದರಿಂದ ಪೌರಕಾರ್ಮಿಕರಿಗೆ ವಿಶ್ರಾಂತಿ ಪಡೆಯಲು ಹೆಚ್ಚಿನ ನೆರವಾಗಲಿದೆ.
ಪಟ್ಟಣದ ಹೊರ ವಲಯದಲ್ಲಿರುವ ಮಾರೇನಹಳ್ಳಿ ಬಳಿ ಪೌರಕಾರ್ಮಿಕರ ಕಾಲೊನಿ ನಿರ್ಮಾಣಕ್ಕಾಗಿ ೩.೧೮ ಎಕರೆ ಜಾಗ ಕಾಯ್ದಿರಿಸಿದ್ದು, ರಸ್ತೆ ಸಮಸ್ಯೆ ಇದ್ದು ಅಲ್ಲಿನ ನಾಗರಿಕರಿಗೆ ರಸ್ತೆ ವ್ಯವಸ್ಥೆ ಮಾಡಿ ನಂತರ ಸೂಕ್ತ ರೀತಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.
ಪುರಸಭಾ ವ್ಯಾಪ್ತಿಯ ೧೦ನೇ ವಾರ್ಡ್ನಲ್ಲಿ ೧೦ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಹಾಗೂ ೬.೨೫ ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕೆ.ಆರ್.ಮಾರುಕಟ್ಟೆಯಲ್ಲಿ ೨೧.೪೦ ಲಕ್ಷ ರೂ. ವೆಚ್ಚದಲ್ಲಿ ನೆಲಹಾಸು ಮತ್ತು ಮಾರಾಟ ಕಟ್ಟೆ, ಪಾದಚಾರಿ ಮಾರ್ಗ ನಿರ್ಮಾಣ, ೧ನೇ ವಾರ್ಡ್ನಲ್ಲಿ ೨೧.೨ ಲಕ್ಷ, ೩ನೇ ವಾರ್ಡ್ ನಲ್ಲಿ ೬.೫ ಲಕ್ಷ, ೫ನೇ ವಾರ್ಡ್ ನಲ್ಲಿ ೪.೫ ಲಕ್ಷ ರೂ. ವೆಚ್ಚದಲ್ಲಿ ಅಗತ್ಯ ಕಾಮಗಾರಿಗಳನ್ನು ಮಾಡಲಾಗುವುದು.
ಒಂದನೇ ವಾರ್ಡ್ ನಲ್ಲಿ ಸಿಹಿನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಆರ್.ಯತೀಶ್ಕುಮಾರ್, ಮಾಜಿ ಅಧ್ಯಕ್ಷ ಸಿ.ಎನ್.ಮೋಹನ್ ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್.ವೆಂಕಟೇಶ್, ನಿರ್ದೇಶಕ ಸಿ.ಜಿ.ಜಗದೀಶ್ ಹಾಗೂ ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು ಭಾಗವಹಿಸಿದ್ದರು.
ವರದಿ : ಐ ಕೆ ಮಂಜುನಾಥ್
