ಚನ್ನರಾಯಪಟ್ಟಣ, ಆಗಸ್ಟ್ 18: ತಾಲೂಕಿನ ಶ್ರವಣಬೆಳಗೊಳದ ಭಂಡಾರ ಬಸದಿಯ ಚವ್ವೀಸ ತೀರ್ಥಂಕರರಿಗೆ ಧಾಮ ಸಂಪ್ರೋಕ್ಷಣೆಯ ಪ್ರಯುಕ್ತ ಇಂದ್ರಪ್ರತಿಷ್ಠೆ, ಸರ್ವದೋಷ ಪ್ರಾಯಶ್ಚಿತ್ತ ಸೇರಿದಂತೆ ಸಕಲ ಧಾರ್ಮಿಕ ವಿಧಿ ವಿಧಾನಗಳು ಆಚಾರ್ಯ ಮುನಿಗಳ ಸಾನಿಧ್ಯ ಹಾಗೂ ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ನೆರವೇರಿದವು.
ವಜ್ರಲೇಪನಗೊಂಡ ಖಡ್ಗಾಸನದ 24 ತೀರ್ಥಂಕರರ ಸನ್ನಿಧಿಯಲ್ಲಿ ಮಂಗಳ ಕಲಶಗಳನ್ನು ಪ್ರತಿಷ್ಠಾಪಿಸಲಾಯಿತು. ಲಘು ಪಂಚಕಲ್ಯಾಣದ ಅಂಗವಾಗಿ ಜ್ಞಾನ ಕಲ್ಯಾಣ, ಮೋಕ್ಷ ಕಲ್ಯಾಣ ಸೇರಿದಂತೆ ಧಾರ್ಮಿಕ ವಿಧಿಗಳನ್ನು ಪ್ರತಿಷ್ಠಾಚಾರ್ಯರು ಆಚಾರ್ಯರ ಮಾರ್ಗದರ್ಶನದಲ್ಲಿ ನೆರವೇರಿಸಿದರು. ಣಮೋಕಾರ ಮಹಾಮಂತ್ರದ ಧ್ವನಿಯ ಮಧ್ಯೆ ಕೇಸರಿ ವಸ್ತ್ರಧಾರಿಗಳು, ಕಿರೀಟಧಾರಿಗಳಾದ 24 ಶ್ರಾವಕರು ಏಕಕಾಲದಲ್ಲಿ ಜಲಾಭಿಷೇಕ ನೆರವೇರಿಸಿದರು. ನಂತರ ಕ್ಷೀರಾಭಿಷೇಕ, ಅಷ್ಟಗಂಧಾಭಿಷೇಕ, ಪುಷ್ಪವೃಷ್ಠಿ, ಮಹಾಶಾಂತಿಧಾರಾ ಕಲಶ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.

ಧಾರ್ಮಿಕ ವೇದಿಕೆಯಲ್ಲಿ ಮಾತನಾಡಿದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕರು, “ಜಿನಮೂರ್ತಿಗಳಿಗೆ ಸಂಭವಿಸಿದ್ದ ಭಿನ್ನವನ್ನು ವಜ್ರಲೇಪನ ಮಾಡಿಸುವ ಮೂಲಕ ಪ್ರಾಚೀನ ಪರಂಪರೆಯನ್ನು ಉಳಿಸಲಾಗಿದೆ. ಅದಕ್ಕಾಗಿ ಲಘು ಪಂಚಕಲ್ಯಾಣ ಧಾರ್ಮಿಕ ವಿಧಿಗಳನ್ನು ನಡೆಸಲಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒರಿಸ್ಸಾದಿಂದ ಬಂದ ಶಿಲ್ಪಿಗಳು ಹಾಗೂ ಕ್ಷೇತ್ರದ ದಾನಿಗಳಿಗೆ ಗೌರವ ಸಲ್ಲಿಸಲಾಯಿತು. ಪೂಜಾ ನೇತೃತ್ವವನ್ನು ಪ್ರತಿಷ್ಠಾಚಾರ್ಯರಾದ ಎಸ್.ಪಿ. ಜಿನೇಶ್, ಎಸ್.ಡಿ. ನಂದಕುಮಾರ್ ಶಾಸ್ತ್ರಿ, ಪ್ರೇಂಕುಮಾರ್, ಎಸ್.ಎಸ್. ವಿಮಲ್ ಕುಮಾರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಆಚಾರ್ಯ ಸುವಿಧಿ ಸಾಗರ ಮಹಾರಾಜರು, ವರ್ಧಮಾನ ಸಾಗರ ಮಹಾರಾಜರು, ವಿದ್ಯಾಸಾಗರ ಮಹಾರಾಜರ ಸಂಘಸ್ಥ ತ್ಯಾಗಿಗಳು, ಅರಹಂತಗಿರಿಯ ಧವಲಕೀರ್ತಿ ಸ್ವಾಮೀಜಿ, ಕನಕಗಿರಿಯ ಭುವನಕೀರ್ತಿ ಸ್ವಾಮೀಜಿ, ಕಂಬದಹಳ್ಳಿಯ ಬಾನುಕೀರ್ತಿ ಸ್ವಾಮೀಜಿ, ಆರತಿಪುರದ ಸಿದ್ಧಾಂತಕೀರ್ತಿ ಸ್ವಾಮೀಜಿ ಹಾಗೂ ಸೋಂದಾ ಜೈನಮಠದ ಭಟ್ಟಾಕಲಂಕ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.
